ಅನುದಿನ ಕವನ-೨೪೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳ ನೆನಪು

ಅವಳ ನೆನಪು……..

ಅವಳ ನೆನಪುಗಳೇ ಹಾಗೆ-
ಆಗಸದಿಂದ ಬಿಡದೆ
ಸುರಿವ ಹನಿಗಳಂತೆ !
ಅಡಿಯಿಂದ ಮುಡಿಯವರೆಗೆ
ತೋಯ್ದರೂ ಬೆಚ್ಚನೆ ರೋಮಾಂಚನ
ಮೈಯ ಪ್ರತಿ ಕಣದೊಳಗೂ
ಮೋಡಗಳ ಸ್ಪರ್ಶ
ಮೊದಲ ಮಳೆಗೆ ನೆಲದಿಂದ
ಮೇಲೆದ್ದ ಘಮಲಿನ ಹೂಬನ
ನೆಲಕೆ ತಾಕುವ ಹನಿಗಳ
ತಂತನನ ತಾನನ
ಹರಿವ ನೀರಿನ ಜುಳು ಜುಳು ಗಾನ

ಅವಳ ನೆನಪುಗಳೇ ಹಾಗೆ-
ಒದ್ದೆ ನೆಲದಲ್ಲಿ
ಬಿರುಸಿನಿಂದ ಮೇಲೇಳುವ ಹಸಿರು
ನಿಂತರೂ ನಿಲ್ಲೆನೆಂಬಂತೆ
ಹೊಳೆವ ಹುಲ್ಲಿನ ಹಿಮಮಣಿ
ಇನ್ನೂ ಇರಬೇಕೆನಿಸುವ
ಬಣ್ಣದ ಕಾಮನಬಿಲ್ಲು
ರಕ್ತದ ಬಿಸುಪನ್ನು ಹೊತ್ತ
ಕೆಂಗುಲಾಬಿ

ಅವಳ ನೆನಪುಗಳೇ ಹಾಗೆ-
ತಾನಾಗಿಯೇ ಬರೆಸಿಕೊಳ್ಳುವ ಕವಿತೆ
ಹೇಳಲಾಗದೆ ಎದೆಯೊಳಗೇ
ಉಳಿವ ಭಾವತೀವ್ರತೆ
ಅವಳು ಬರೀ ನೆನಪಲ್ಲ
ನೆನಪಿನೊಳಗಣ ಬೆರಗು, ಬೆಡಗು
ಸದ್ದಿಲ್ಲದೆ ಎದೆಯೊಳಗೆ
ತುಂಬಿ ಹರಿವ ನದಿಯ ಸೊಬಗು !

-ಸಿದ್ಧರಾಮ ಕೂಡ್ಲಿಗಿ

*

*****