ಬದುಕಿನ ಬಂಡಿ
ಬದುಕಿನ ಬಂಡಿಯ
ಹೊಣೆಹೊತ್ತು ಎಳೆವ
ಪರಿ ಇದು ಬಲು ಭಾರ
ನೋವನ್ನು ಸಹಿಸಿ
ಸೋಲನ್ನು ಅನುಭವಿಸಿ
ಗೆಲುವಿಗಾಗಿ ಹೆಚ್ಚಿದೆ ಕಾತರ
ಆದರ್ಶಗಳಿಗಿಂತಲೂ ಇಲ್ಲಿ
ಹಣದ ಅಂತಸ್ತಿನದೇ
ನಿತ್ಯವೂ ಅಧಿಕಾರ
ನಿಷ್ಟೆ ಪ್ರಾಮಾಣಿಕತೆಗಳೆಲ್ಲ
ಮೂಲೆಗುಂಪಾಗಿ ನೆಮ್ಮದಿಗೆ
ತಂದಿದೆ ಇಲ್ಲಿ ಸಂಚಕಾರ
ಉಳ್ಳವರ ಅಟ್ಟಹಾಸಗಳ ಮುಂದೆ
ಇಲ್ಲದವರ ನರಳಾಟಕ್ಕೆ ಬೆಲೆ ಇಲ್ಲ
ಬದುಕಿನ ಈ ಪರಿಗೆ ಕೊನೆಯಿಲ್ಲ
ಸಹನೆಯ ಮಂತ್ರವ ಪಠಿಸುತ್ತಲಿ
ಅಸಹಾಯಕತೆಯ ಬೇಗೆಯಲಿ ಬೇಯತಲಿ
ಹೋರಾಡದೆ ಇಲ್ಲಿ ವಿಧಿ ಇಲ್ಲ
ಬದುಕು ಬೆಂದವರನೇ ನೋಯಿಸುವುದು
ಜೀವನ ನೊಂದವರನೇ ನರಳಿಸುವುದು
ಬಡವನಿಲ್ಲಿ ಎಲ್ಲ ಸಹಿಸಬೇಕು
ಬವಣೆಗಳ ಬತ್ತಳಿಕೆಯಲ್ಲಿ ಬಸವಳಿಯದೆ
ನಿತ್ಯ ಎದುರಾಗುವ ಸಂಕಷ್ಟಗಳಿಗೆ ಅಂಜದೆ
ನೆಮ್ಮದಿಯ ಬಾಳಿಗಾಗಿ ಶ್ರಮಿಸಬೇಕು
-ಅಪ್ಪಾಜಿ ಎ ಮುಸ್ಟೂರು ಸುಧಾ
*****