ಅನುದಿನ‌ ಕವನ-೨೪೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕೆಂಪಾದ ಶಬ್ದಗಳು

ಕೆಂಪಾದ ಶಬ್ದಗಳು

ಯಾಕೋ ಶಬ್ದಗಳು
ಈಗೀಗ ಅರ್ಥವನ್ನೇ
ಕಳೆದುಕೊಂಡಿವೆ !
ಒಂದನ್ನೊಂದು ಕಂಡರೆ
ಕಿಡಿಕಾರುವ ಈ ಶಬ್ದಗಳು
ಮಿದುಳಿನಗುಂಟ ಮೈಯ
ನರನಾಡಿಗಳಲ್ಲಿ ಹರಿದಾಡಿ
ಹಾರಾಡಿ ವಿನಾಕಾರಣ
ಹೃದಯದ ಪ್ರೀತಿಯ
ಬಡಿತವನೂ ಲೆಕ್ಕಿಸದೆ
ಕೆಂಡಗಣ್ಣು ಬೀರುತಿವೆ
ಪ್ರೀತಿಯ ಬಂಧವನೂ
ಕಳೆದುಕೊಂಡು ದಿಕ್ಕೇಡಿಗಳಾಗಿ
ಯಾವು ಯಾವುದಕ್ಕೋ
ಡಿಕ್ಕಿ ಹೊಡೆದು ಕೇಕೆ ಹಾಕುತಿವೆ

ಮೊನೆಯಂತಿರುವ ಪ್ರತಿ
ಶಬ್ದಗಳ ಅರ್ಥಗಳನು
ಆಗಿನಿಂದ ಶಬ್ದಕೋಶದಲಿ
ಹುಡುಕುತಲೇ ಇರುವೆ
ಮುಖವೇ ಇಲ್ಲದ
ಅರ್ಥ ಕಳೆದುಕೊಂಡ
ಸತ್ವಹೀನ, ಹೃದಯಹೀನ
ಅಸ್ತಿತ್ವವೇ ಇಲ್ಲದ ಈ ಶಬ್ದಗಳು
ಪೆಡಂಭೂತಗಳಾಗಿ
ರಕ್ಕಸ ನಾಲಗೆಯನ್ನು ಚಾಚಿ
ಆಪೋಶನಗೈಯಲು ಕುಣಿಯುತಿವೆ

ಶಬ್ದಕೋಶದಲಿ ಅರ್ಥವಿರುವ
ಶಬ್ದಗಳೆಲ್ಲ ಮೂಕವಾಗಿ
ಆಗಾಗ ಅಟ್ಟಹಾಸಕೆ ಬಲಿಯಾಗಿ
ಕೆಂಪಿನೋಕುಳಿಯಾಗಿ
ಹಗಲಿನಲೂ ಆಗಸವ
ಕೆಂಪಾಗಿಸುತಿವೆ !

– ಸಿದ್ಧರಾಮ ಕೂಡ್ಲಿಗಿ
****