ಅನುದಿನ ಕವನ- ೨೫೦, ಕವಿ:ಮನಂ( ಎಂ. ನಂಜುಂಡಸ್ವಾಮಿ ಐಪಿಎಸ್, ಬೆಂಗಳೂರು), ಕವನದ ಶೀರ್ಷಿಕೆ: ಸಂಬಂಧಗಳು ಏಕೆ?

ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 250 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ.
ಈ ಇನ್ನೂರೈವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ಕರ್ನಾಟಕ ಕಹಳೆ ಡಾಟ್ ಕಾಮ್ ದಾಗಿದೆ.
ಇಂದಿನ ವಿಶೇಷ 250ನೇ “ಅನುದಿನ ಕವನ”ದ ಗೌರವಕ್ಕೆ ಸರಳ ಸಜ್ಜನಿಕೆಯ ಪ್ರೇಮ‌ಕವಿ, ಸಾಹಿತ್ಯ, ಸಂಶೋಧನಾ ವಲಯದಲ್ಲಿ ‘ ಮನಂ’ ಕಾವ್ಯನಾಮದಲ್ಲಿ ಜನಪ್ರಿಯರಾಗಿರುವ ಶ್ರೀ ಮಳವಳ್ಳಿ ನಂಜುಂಡಸ್ವಾಮಿ ಐಪಿಎಸ್ ಅವರ ‘ಸಂಬಂಧಗಳು ಏಕೆ?’ ಕವಿತೆ ಪಾತ್ರವಾಗಿದೆ.
(ಸಂಪಾದಕರು:ಕರ್ನಾಟಕ ಕಹಳೆ.ಕಾಮ್)👇

ಸಂಬಂಧಗಳು ಏಕೆ ?

ಹುಡುಗಿ
ವಾಲಾಡುವ ಜೋತಾಡುವ ಬೆಲೆಗಳಿಲ್ಲದ ಸಂಬಂಧಗಳು ಏಕೆ ?
ಗಟ್ಟಿಯಾಗಿ ನೆಲೆ ನಿಲ್ಲಲಾಗದ ನೆರೆಯಂತಾದ ಸಂಬಂಧಗಳು ಏಕೆ ?
ನಾನು ನಿಮ್ಮವಳೆಂಬ ಭಂಡ ತೋರಿಕೆಯ ಸಂಬಂಧಗಳು ಏಕೆ ?

ಹುಡುಗಿ
ಮನದಾಳಕ್ಕಿಳಿಯಲಾಗದೆ ಬದುಕುವ ಸಂಬಂಧಗಳು ಏಕೆ ?
ಕದ್ದು ಕದ್ದು ನುಸುಳಿ ಬರುವ ಬಾಳದ ಸಂಬಂಧಗಳು ಏಕೆ ?
ಇದ್ದು ಇದ್ದು ಬೆಳೆಯದೆ ಉರುಳಿ ಹೋಗುವ ಸಂಬಂಧಗಳು ಏಕೆ ?

ಹುಡುಗಿ
ಅಂಟಿಕೊಂಡ ನಂಟಾದ ಬಂಧನವ ಅರಿಯದ ಸಂಬಂಧಗಳು ಏಕೆ ?
ಬೆಂಟದೆ ಎಂಟೆದೆ ಬಂಟನ ಅರಿಯದೆ ತೊರೆದ ಸಂಬಂಧಗಳು ಏಕೆ ?
ಕಂಟು ಹಿಡಿದ ಕಗ್ಗಾಂಟದ ತಂಟೆ ತಕರಾರಿನ ಸಂಬಂಧಗಳು ಏಕೆ ?

ಹುಡುಗಿ
ಕತ್ತರಿಸ ಬೇಕಾದದ್ದನ್ನೇಲ್ಲಾ ತಲೆ ಮೇಲೆ ಹೊತ್ತು ಮೆರೆಸುವ ಸಂಬಂಧಗಳು ಏಕೆ ?
ಭಿತ್ತರಿಸಲು ಏನೂ ಇಲ್ಲದಿದ್ದಾಗ ಉತ್ತರಿಸಲೇ ಬೇಕೆನ್ನುವ ಪ್ರಶ್ನೆಗಳ ಸಂಬಂಧಗಳು ಏಕೆ ?
ಒತ್ತರಿಸಿ ಬಂದ ಭಾವನೆಗಳಿಗೂ ರೂಪ ಕೊಡದೆ ತತ್ತರಿಸುವ ಸಂಬಂಧಗಳು ಏಕೆ ?

ಹುಡುಗಿ
ಮೆಚ್ಚದೆ ಕಚ್ಚಿ ಕೊಳ್ಳಲಾಗದೆ ಕೊಚ್ಚಿ ಹೋಗುವ ರೊಚ್ಚಿನ ಸಂಬಂಧಗಳು ಏಕೆ ?
ಬಿಚ್ಚದೆ ಮನವ ಮನಂ ನಮ್ಮವನೆಂದು ಮೆರೆಸುವ ಸಂಬಂಧಗಳು ಏಕೆ ?
ಒಲವು ಹೆಚ್ಚಾಗಿ ಹುಚ್ಚಾಗಿ ಬೆಚ್ಚಗೆ ಇರಿಸಲಾಗದ ಸಂಬಂಧಗಳು ಏಕೆ ?

ಹುಡುಗಿ
ತಣಕ್ಕಾಗಿ ಮಣ ಮಣ ಹಣಕ್ಕಾಗಿ ಕಣ್ಣು ಕಣ್ಣು ಬಿಟ್ಟು ಕೊಂಡಿರುವ ಸಂಬಂಧಗಳು ಏಕೆ ?
ಬೆಣೆ ಬಡಿದು ಕೊಂಡಂತೆ ಕೊಂಡಾಡಲಾಗದ ಕೊಂಡದ ಅಡಿಯ ಸಂಬಂಧಗಳು ಏಕೆ ?
ಬಡಿದಾಡಿಕೊಂಡರೂ ಗಂಡಾಗುಂಡಿಯಲ್ಲೂ ಉಳಿಸಿಕೊಳ್ಳಲಾಗದ ಸಂಬಂಧಗಳು ಏಕೆ ?

ಹುಡುಗಿ
ಒಡನೆ ತಡಬಡಾಯಿಸಿಕೊಂಡು ಮೂಡಿದ ಒಲವ ಉಳಿಸಿಕೊಳ್ಳದ ಸಂಬಂಧಗಳು ಏಕೆ ?
ಒಂದು ಚೂರೂ ಕೆಳೆಯ ಕಳೆದುಕೊಳ್ಳಲಿಚ್ಚಿಸದವನ ಕಳೆದು ಕೊಳ್ಳುವ ಸಂಬಂಧಗಳು ಏಕೆ ?
ನಚ್ಚದ ನೆಚ್ಚದ ತುಚ್ಚಿಕರಿಸಿದ ಕೊಚ್ಚಿಕೊಂಡು ಕಳೆಯಾದ ಕಚ್ಚಾ ಸಂಬಂಧಗಳು ಏಕೆ ?

-ಮನಂ, ಬೆಂಗಳೂರು