ಕಾವ್ಯದೀಪ್ತಿ ಕವನ ಸಂಕಲನ ಬಿಡುಗಡೆ: ಕವಿಗಳು ನವ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು -ಪ್ರಾಧ್ಯಾಪಕ ಡಾ.ಎಂ.ಇ.ಶಿವಕುಮಾರ ಹೊನ್ನಾಳಿ

ರಾಣೆಬೆನ್ನೂರ: ನೆಲದ ಒಬ್ಬ ಸಂವೇದನಾಶೀಲ ಕವಿ ಸಮಾಜದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಲೇ ಕಾವ್ಯ ಕಟ್ಟುತ್ತಾ ಜನರ ನೋವಿಗೆ ಮಿಡಿಯಬೇಕು. ನವ ಸಮಾಜ ನಿರ್ಮಾಣದ ಹಂಬಲವನ್ನು ಹೊತ್ತು ಶಾಂತತೆಯಿಂದ ಬುದ್ಧನ ಕನಸು ಕಾಣುವ ಹಂಬಲದ ಕವಿಯಾಗಬೇಕು ಎಂದು ತರಳಬಾಳು ಇಂಜಿನಿಯರಿಂಗ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಇ.ಶಿವಕುಮಾರ ಹೊನ್ನಾಳಿಯವರು ಅಭಿಪ್ರಾಯಪಟ್ಟರು.
ನಗರದ ಕಾಗದ ಸಾಂಗತ್ಯ ವೇದಿಕೆ, ಸಂಜೀವಿನಿ ಪದವಿಪೂರ್ವ ಕಾಲೇಜು ಇವರುಗಳ ಆಶ್ರಯದಲ್ಲಿ ಪಿ.ಬಿ ರಸ್ತೆಯಲ್ಲಿರುವ ಸಂಜೀವಿನಿ ಕಾಲೇಜಿನಲ್ಲಿ ಕವಯತ್ರಿ ಕವಿತಾ ಸಾರಂಗಮಠ ರಚಿತ ಕಾವ್ಯದೀಪ್ತಿ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಲೋಕದ ತಲ್ಲಣಗಳಿಗೆ, ಸಂಕಟಗಳಿಗೆ ಮಿಡಿಯುವ ತುಡಿತದಲ್ಲಿರುವ, ಸಾಮಾಜಿಕ ಕಾಳಜಿಯನ್ನುಟ್ಟುಕೊಂಡು ಬರೆಯುತ್ತಿರುವ ಬರಹಗಾರರು ಈ ನೆಲದ ಪ್ರೀತಿಯ ದನಿಯಾಗಿಬೇಕು. ಕವಿಯಾದವನು ಒಡಲಾಳದ ನೋವುಗಳನ್ನು ಸೂಕ್ಷ್ಮವಾಗಿ ವಾಗಿ ಗ್ರಹಿಸಿಕೊಳ್ಳಬೇಕು. ಬದುಕು ಅಂತರಂಗದ ತೊಳಲಾಟ, ಮೌನ, ತಾಯ್ತನ, ಹೆಣ್ತನ, ಪ್ರೇಮ, ವಿಷಾದಗಳ ಸುತ್ತ ತಿರುಗಿ ಓದುಗರನ್ನು ಚಿಂತನೆಗೆ ತೊಡಗಿಸುವಂತೆ ಮಾಡುವುದು ಬರಹಗಾರನ ಕರ್ತವ್ಯವಾಗಬೇಕು. ಮನಸ್ಸಿನಲ್ಲಿ ಮೂಡಿದ ವೈಚಾರಿಕತೆ, ವೈಜ್ಞಾನಿಕತೆ, ಆಧ್ಯಾತ್ಮಿಕತೆ, ಸಾಮಾಜಿಕ, ಧಾರ್ಮಿಕ, ಲೌಕಿಕ ಜಾಣ್ಮೆ ಸೇರಿದಂತೆ ಸಮಕಾಲೀನ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಕವಿತೆ ಕೂಡಿರಬೇಕೆಂದು ಹೇಳಿದರು.
ಕೃತಿ ಕುರಿತು ಮಾತನಾಡಿದ ಕವಿ ದೇವರಾಜ ಹುಣಸಿಕಟ್ಟಿ , ಕವಿತೆಗಳು ಬದುಕಿನ ಶೋಧಕ್ಕೆ ಇಂಬು ಕೊಡುತ್ತವೆ. ಕವಿತೆಯ ಒಡಲಾಳಗಳು ಚಿಂತಾಗ್ನಿಯನ್ನು ಗರ್ಭೀಕರಿಸಿಕೊಂಡು ಸ್ಫೋಟವಾಗಿವೆ. ತಣ್ಣನೆಯ ಕಾವ್ಯ ಒಳಗಿಳಿದು ಬಿಸಿಯ ಸ್ಪರ್ಶ ನೀಡುತ್ತವೆ. ಕವಿತೆಯ ಕಟ್ಟುವಿಕೆ ಒಂದು ಕಲೆ. ಅದೊಂದು ಧ್ಯಾನಸ್ಥಿತಿ. ತಪಸ್ಸು. ವಿನೂತನ ಭಾವಗಳು ಮನದಾಳದಲ್ಲಿ ಅರಳುವಾಗ ಅವುಗಳನ್ನು ಒಂದೆಡೆ ಪೋಣಿಸಿ ಕವಿತೆಯಾಗಿಸುವ ಕ್ರಿಯೆ ಅದ್ಭುತವಾದದು ಎಂದು ಅಭಿಪ್ರಾಯಪಟ್ಟರು.
ಸಮಾಜದ ಒಂದು ಭಾಗವಾಗಿರುವ ಕವಿಗೆ ಅವರದೇ ಆದ ಜವಾಬ್ಧಾರಿ ಇದೆ. ಕವಿಯೊಬ್ಬ ಸಮಾಜ ಚಿಂತಕನಾಗಿಯೂ ಕೆಲಸ ನಿರ್ವಹಿಸುತ್ತಾರೆ. ನಿತ್ಯದ ಭುವಿಯ ಮೇಲಿನ ಬದುಕು ತೆರೆದಿಡುವ ಕಟು ವಾಸ್ತವ ಸತ್ಯಗಳಿಗೆ ಕವಿತೆಯ ಒಡಲು ಸ್ಥಳಾವಕಾಶ ನೀಡುತ್ತದೆ. ಕವಿಯ ಲೇಖನಿ ಯಾವತ್ತೂ ಚಿಂತನೆಯ ಚಿತ್ರಗಳನ್ನು ಬಿಡಿಸುತ್ತದೆ. ಕವಿತೆ ಎಂದರೆ ಮಾತನಾಡುವ ಚಿತ್ರ. ಸಂಕಲನದ ಕವಿತೆಗಳು ತಮ್ಮ ತಮ್ಮ ವಲಯದಲ್ಲಿ ತಮ್ಮದೇ ಆದ ಭಾವ ಸಿಂಚನ ಗೈದಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಭುಲಿಂಗ ಕೋಡದ ಅವರು ಮಾತನಾಡಿದರು. ವೇದಿಕೆಯ ಅಧ್ಯಕ್ಷ, ಚಿತ್ರಕಾರ ನಾಮದೇವ ಕಾಗದಗಾರ, ಪ್ರಕಾಶ ಬಳ್ಳಾರಿ, ಎಸ್.ಎಂ.ಕಂಬಳಿ, ಕವಿತಾ ಸಾರಂಗಮಠ, ಉಪಸ್ಥಿತರಿದ್ದರು.
ವಿಶೇಷವೆಂದರೆ ಪ್ರತಿಭಾವಂತ ವಿದ್ಯಾರ್ಥಿನಿ ಕು.ರೇಣುಕಾ ಹುಚ್ಚಗಾರ್ಕಿ ಅವರನ್ನು ಸನ್ಮಾನಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕವಿಗೋಷ್ಠಿ: ಇದೇ ಸಂದರ್ಭದಲ್ಲಿ ದಾಕ್ಷಾಯಣಿ ಉದಗಟ್ಟಿ, ಅಮರನಾಥ ಭೂತೆ, ಲಕ್ಮೀ ಅಡಕೆ, ಅಶ್ವಿನಿ ನವಲೆ, ಮಂಜುಳಾ ಹಿರೇಬಿದರಿ, ಅರ್ಪಿತಾ ನವಲೆ, ಯೋಗೆಶಕುಮಾರ ನ್ಯಾಮತಿ, ನೇತ್ರಾವತಿ.ಆರ್.ಎಚ್, ಈಶ್ವರಿ ಶಿವಾನಂದ ಅವರು ಸ್ವ ರಚಿತ ಕಾವ್ಯ ವಾಚನ ಮಾಡಿದರು.
*****