ಧಾರವಾಡದಲ್ಲಿ ಕನ್ನಡ ಜಾಗೃತಿ ಸಮ್ಮೇಳನ: ಹೊಸಗನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸಿ ಬೆಳೆಸಬೇಕು -ಡಾ. ಟಿ ಎಂ‌ ಭಾಸ್ಕರ್

ಧಾರವಾಡ, ಸೆ.13: ಸಮಕಾಲೀನ ಸಂದರ್ಭದಲ್ಲಿ ವಿಜೃಂಭಿಸುತ್ತಿರುವ ಆಧುನಿಕತೆಯನ್ನು ಬಳಸಿಕೊಂಡು ಸ್ಥಳೀಯ ಭಾಷೆಯನ್ನು ಬೆಳೆಸಬೇಕಾಗಿದೆ ಎಂದು ಕವಿವಿ ಹಿರಿಯ ಪ್ರಾಧ್ಯಾಪಕ ಡಾ.ಟಿ.ಎಂ.ಭಾಸ್ಕರ್ ಅವರು ತಿಳಿಸಿದರು.
ಅವರು ನಗರದ ರಂಗಾಯಣದಲ್ಲಿ ಗಣಕರಂಗ ಸಂಸ್ಥೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡ ಕಾಯಕ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿದರು.
ಹೊಸಗನ್ನಡವನ್ನು ಆಂತರಿಕ ಭಾಷೆ ಮಾತ್ರವಲ್ಲ ವ್ಯವಹಾರಿಕ ಭಾಷೆಯನ್ನಾಗಿ ಕೂಡಾ ಬೆಳೆಸಬೇಕಾಗಿದೆ. ಪೂರಕವಾಗಿ ಭಾಷೆ ಕಟ್ಟಲು ಹಿರಿಯರು ಕೈಗೂಡಿಸಿ ಹೊಸಬರಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಮುಖ್ಯ ಅತಿಥಿ ಕಸಾಪ ನಿಕಟಪೂರ್ವ ಕಾರ್ಯಾಧ್ಯಕ್ಷ ವ.ಚ.ಚನ್ನೇಗೌಡರು ಮಾತನಾಡಿ, ಗುಲಾಮಗಿರಿ ಕಾಲದಲ್ಲಿಯೂ ಕನ್ನಡ ಭಾಷೆ ಬೆಳೆಸಿದ ನಮ್ಮ ಪೂರ್ವಜರು ಶೋಷಣೆಯ ನಡುವೆಯೂ ಮಾತೃಭಾಷೆ ಬೆಳೆಸಿ, ಉಳಿಸಿಕೊಂಡರು. ಆದರೆ, ಈಗ ಪ್ರಜಾನಾಯಕತ್ವದಲ್ಲಿ ಕನ್ನಡ ಉಳಿಸಿಕೊಳ್ಳಲು ಪ್ರಯಾಸ ಪಡುವ ಕಾಲ ಬಂದಿದೆ ಎಂದು ವಿಷಾಧಿಸಿದರು.
ಇದೇ ಸಂದರ್ಭದಲ್ಲಿ ಗಣಕರಂಗ ಪ್ರಕಾಶನ ಪ್ರಕಟಿಸಿದ ಐವರು ಲೇಖಕರ ಐದು ಕೃತಿಗಳನ್ನು ಕವಿವಿ ಪ್ರಾಧ್ಯಾಪಕ ಡಾ.ಧನವಂತ ಹಾಜವಗೋಳ ಲೋಕಾರ್ಪಣೆಗೊಳಿಸಿದರು.
ಕವಿವಿ ಉಪನ್ಯಾಸಕ ಡಾ.ದುಂಡಪ್ಪ ನಾಂದ್ರೆ ಕೃತಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯ ಡಾ.ಜಿನದತ್ತ ಹಡಗಲಿ, ಕನ್ನಡ ಜಾಗೃತಿ ಸಮಿತಿಯ ಸದಸ್ಯ ಕೆ.ಎಚ್.ನಾಯಕ ಮತ್ತು ಲೋಕಾರ್ಪಣೆಗೊಂಡ ಕೃತಿಗಳ ಕೃತಿಕಾರರಾದ ಅಶೋಕ ಹೊಸಮನಿ, ಡಾ.ವಿ.ಜಿ.ಪೂಜಾರ, ಗಣಪತಿ ಗೋ. ಚಲವಾದಿ (ಗಗೋಚ), ಬಸವರಾಜ ಭಜಂತ್ರಿ ಉಪಸ್ಥಿತರಿದ್ದರು.
ಪರಿವರ್ತನೆ ಕೃತಿಕಾರ ಗಣಪತಿ ಗೋ ಚಲವಾದಿ ಸೇರಿದಂತೆ ಅತಿಥಿ ಗಣ್ಯರನ್ನು ಗಣಕರಂಗ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ನಡೆದ ವಿಶೇಷ ವಿಚಾರಗೋಷ್ಟಿಯಲ್ಲಿ ಡಾ.ಬಸವರಾಜ ಹೊಂಗಲ, ಡಾ.ಸಂಗಮ್ಮ ಪರಡ್ಡಿ, ಡಾ.ನೇಮಿನಾಥ ತಪಕೇರಿ, ಡಾ,ಪುಟ್ಟಸ್ವಾಮಿ ಪ್ರಬಂಧಗಳನ್ನು ಅಚ್ಚುಕಟ್ಟಾಗಿ ಮಂಡಿಸಿದರು.
ಸಮಾರೋಪ ಸಮಾರಂಭ: ಸಮಾರೋಪ ನುಡಿಗಳನ್ನಾಡಿದ ಬಾಲವಿಕಾಸ ಅಕಾಡೆಮಿಯ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿಯವರು ಕನ್ನಡ ಜಾಗೃತಿ ವರ್ಷಾಚರಣೆಯನ್ನು ಸರಕಾರವು ಆಚರಿಸುತ್ತಿರುವುದು ಸಂತಸದ ಸಂಗತಿ. ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮೀತವಾಗದೇ ನಿರಂತರ ಕನ್ನಡ ಜಾಗೃತಿಯ ವರ್ಷಾಚರಣೆ ನಡೆಸುವಂತಾಗಲಿ ಎಂದು ಸಲಹೆ ನೀಡಿದರು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ಜಾನಪದ ವಿದ್ವಾಂಸ ಡಾ.ರಾಮು ಮೂಲಗಿ, ಡಾ.ಎಸ್.ಎಸ್.ದೊಡಮನಿ, ಲಕ್ಷ್ಮಣ ಬಕ್ಕಾಯಿ ಅವರು ಮಾತನಾಡಿದರು.
ಗಣಕರಂಗದ ಮುಖ್ಯಸ್ಥ ಹಿಪ್ಪರಗಿ ಸಿದ್ಧರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್ ಕಿಚಡಿ ಮತ್ತು ಶ್ರೀಧರ ಗಸ್ತಿ ನಿರೂಪಿಸಿದರು. ಭೀಮನಗೌಡ ಕಠಾವಿ ವಂದಿಸಿದರು. ನಂತರ ಅನಿಲ್ ಮೇತ್ರಿ ಸಂಗಡಿಗರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.


*****

One thought on “ಧಾರವಾಡದಲ್ಲಿ ಕನ್ನಡ ಜಾಗೃತಿ ಸಮ್ಮೇಳನ: ಹೊಸಗನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸಿ ಬೆಳೆಸಬೇಕು -ಡಾ. ಟಿ ಎಂ‌ ಭಾಸ್ಕರ್

Comments are closed.