ಧರಣೀಪ್ರಿಯೆ ಅವರ ‘ಮುಕ್ತಕ’ ಗಳು
*****
೧
ಮನೆಯವರ ತೊರೆಯದಿರು ಅನ್ಯರನು ಒಲಿಸುತಲಿ
ಕೊನೆತನಕ ಬಾಳುವುದು ಜೊತೆಯಾಗಿ ಕೇಳು
ದಿನವನ್ನು ಕಳೆಯುತಲಿ ಧನವಂತ ನಾನೆಂದು
ಬಣಗುಡುತ ಬೊಗಳೆಯನು ‐ಧರಣಿದೇವಿ
೨
ಕೊರಗದಿರು ಮನದಲ್ಲಿ ಕಷ್ಟವನು ಸಹಿಸುತಲಿ
ಮರುಗದಿರು ಅನ್ಯರನು ನೋಡುತಲಿ ನೀನು
ಸೊರಗದಿರು ಹಣವಂತ ನಾನಲ್ಲ ವೆನ್ನುತಲಿ
ಧರೆಯಲ್ಲಿ ದುಡಿಯುತಿರು-ಧರಣಿದೇವಿ
೩
ನೆರೆಬಂದ ಕಾಲಕ್ಕೆ ಸಿಂಗಾರಯಾಕವ್ವ
ಪೊರೆಬಂದ ಕಂಗಳಿಗೆ ಬಣ್ಣವೇ ಇಲ್ಲ
ಕರೆದಾಗ ಹೋಗುವುದ ಮರೆತಿರುವೆ ಯಾಕವ್ವ
ಸಿರಿತನದಿ ಮರೆಯದಿರು- ಧರಣಿದೇವಿ
೪
ಧರಣಿಯೊಳು ಬದಕಿರಲು ಅನುದಿನವು ಪರಿತಪಿಸಿ
ಕರಕಷ್ಟ ಪಡುತಿರಲು ನರಜನ್ಮ ಸಾಕು
ಪರಿಹರಿಸು ಭಗವಂತ ಬಂದಿರುವ ತೊಂದರೆಯ
ಹರಿನಿನ್ನ ಬೇಡುವೆನು- ಧರಣಿದೇವಿ
೫
ಜರಿದವರ ಎದುರಲ್ಲಿ ಮೆರಿಬೇಕು ತಲೆಯೆತ್ತಿ
ಮರುಗುವರು ಸಿಕ್ಕಾಗ ಮನಬಿಚ್ಚಿ ನುಡಿದು
ಶಿರಬಾಗಿ ಕಾಲಡಿಗೆ ಸುಳಿದಾಡಿ ಜಗದಲ್ಲಿ
ಹರನನ್ನು ಬೇಡುತಲಿ ‐ಧರಣಿದೇವಿ
೬
ರವಿಕಿರಣ ಸೂಸಿರಲು ಇಬ್ಬನಿಯು ಚಿಮ್ಮಿರಲು
ಸವಿನೆನಪು ಕಾಡುತಲಿ ಬೆಳಗಿನಲಿ ಹಿತದಿ
ನವಿರಾದ ತಂಗಾಳಿ ಬೀಸಿರಲು ಹೊಗಸಿನಲಿ
ಕವಿಮನಕೆ ಆನಂದ- ಧರಣಿದೇವಿ
೭
ಮನದಲ್ಲಿ ಶಿವಧ್ಯಾನ ಮಾಡುತಲಿ ಬೆಳಗೆದ್ದು
ದಿನದಲ್ಲಿ ಸಂತಸವ ನೀಡೆಂದು ಬೇಡಿ
ಕನಸನ್ನು ನನಸಾಗಿ ಪಡೆಯುವೆನು ಶ್ರಮದಿಂದ
ಕನಿಕರದಿ ಕಾಪಾಡು-ಧರಣಿದೇವಿ
೮
ಅನುದಿನವು ನಮಿಸುತಲಿ ಭಾನುವನು ಬೇಡುತಲಿ
ಕನಿಕರಿಸಿ ನನಗಿಂದು ಬೆಳಕನ್ನು ನೀಡು
ಮನದಾಸೆ ಜಗದಲ್ಲಿ ನನಸಾಗಿ ಪಡೆವಂತೆ
ದಿನದಲ್ಲಿ ಸಹಕರಿಸು- ಧರಣಿದೇವಿ
-ಧರಣೀಪ್ರಿಯೆ
ದಾವಣಗೆರೆ
*****