ಕನ್ನಡದ ಬಹುಮುಖ್ಯ ಕವಿ ಸುಬ್ಬು ಹೊಲೆಯಾರ್ ಅವರು ಇಂದು ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ಲೇಖನಿ ಸದಾ ಸಮ ಸಮಾಜಕ್ಕಾಗಿ ಮಿಡಿಯುತ್ತಿರುತ್ತದೆ. ಅಸಮಾನತೆ, ಅಸ್ಪೃಶ್ಯತೆ,ಲಿಂಗ ತಾರತಮ್ಯ, ಜಾತಿ ಶೋಷಣೆ ವಿರುದ್ಧ ನಿರಂತರ ಸಾತ್ವಿಕ ಪ್ರತಿರೋಧ ಒಡ್ಡುತ್ತಿರುವ ಸುಬ್ಬಣ್ಣ ಅವರ ‘ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ’ ಕವಿತೆಯನ್ನು ಇಂದು ಪ್ರಕಟಿಸುವ ಮೂಲಕ ‘ಕರ್ನಾಟಕ ಕಹಳೆ ಡಾಟ್ ಕಾಮ್’ ಶುಭ ಹಾರೈಸುತ್ತದೆ.
ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ
ಮುದ್ದು ಮುದ್ದಾದ ವೈದಿಕ ಹಕ್ಕಿಯೊಂದು
ನನ್ನ ಮೆದುಳ ಕುಕ್ಕುತ್ತಿತ್ತು
ಇದ ಕಂಡ ಶೂದ್ರಾದಿ ಹಕ್ಕಿಗಳು
ಹೃದಯವನ್ನೇ ಹೊರಗೆಳೆದು ದೇಹದಿಂದ
ಕುಟುಕತೊಡಗಿದಾಗ,
ನನ್ನ ಹೃದಯ ಮಾತನಾಡಿತು
ಪ್ರಿಯ ಶರಣರು ಶರಣಾಗದ ಶೂದ್ರಾದಿ ವೈದಿಕರೇ
ನೋವಾಗದಿರಲಿ ನಿಮ್ಮ ಕೊಕ್ಕುಗಳಿಗೆ ಅಂದೆ,
ನನ್ನ ಇನ್ನಷ್ಟೂ ಕುಕ್ಕತೊಡಗಿದ್ದವು
ಸುಂದರ ಅಸ್ಥಿಪಂಜರವಾದೆ.
ನನ್ನ ಅಸ್ಥಿ ಮಾತನಾಡಿತು
ಹೊಟ್ಟೆತುಂಬಿತಲ್ಲಾ ಬಿಟ್ಟುಬಿಡಿರಣ್ಣ ಅಂದೆ.
ಅಸ್ಥಿಯನ್ನು ಹಾರಿಸಿಕೊಂಡು
ಹೋದವು ಹದ್ದುಗಳ ಹಾಗೆ
ಅಲ್ಲೇ ಹರಿದಾಡಿಕೊಂಡಿದ್ದ ಇರುವೆಗೆ
ಸೇರಿಕೊಂಡಿತು ನನ್ನ ಉಸಿರು
ಹೂವಾದೆ, ಹಣ್ಣಾದೆ, ಮಣ್ಣಾದೆ
ಅನ್ನವಾದೆ, ಅರಿವಾದೆ, ಉಪ್ಪಾದೆ
ತೆಪ್ಪವಾದೆ, ನೋವಾಗದ ಚಪ್ಪಲಿಯಾದೆ
ಈಗ ಹೇಳಿ ನನ್ನ ಕೇರಿ ಯಾವ ಉಪಗ್ರಹಕ್ಕೆ ಸೇರಿದ್ದು
ನಾನು ಗೆದ್ದಿದ್ದೇನೆಂದು ಸೋತಿದ್ದೇನೆಂದು
ತಲೆ ಎತ್ತದೆ ತೆನೆ ಬಾಗಿದ ಹಾಗೆ
ಮಧ್ಯಮ ಮಾರ್ಗದ ಕಾಲುದಾರಿಯಲ್ಲಿ ನಡೆಯುತ್ತಿದ್ದೇನೆ
ಹೆಣ್ಣುಗಳ ಹಬ್ಬ ಈಗ
ದು:ಖದ ಅಂಗಡಿಯಲ್ಲಿ
ಕಣ್ಣೀರು ಮಾರಾಟಕ್ಕಿದೆ.
ಗಲ್ಲದ ಮೇಲೆ ಗಂಡಸರಿದ್ದಾರೆ,
ನಿನ್ನ ನೋವಿಗೂ ಬೆಲೆ ಬಂದಿದೆ,
ಎಂದು ತಿಳಿಯಬೇಡ.
ಒಡೆದುಹಾಕು ಗಲ್ಲವನ್ನು
ಪುರುಸೊತ್ತು ಮಾಡಿಕೊಳ್ಳಬೇಕು ಕಣ್ಣೀರಿಗೆ ಗೆಳತಿ.
ಎಲ್ಲರ ಮನೆಯ ಮಕ್ಕಳು ಅಳುತ್ತವೆ ಜಗತ್ತಿನಲ್ಲಿ
ನನ್ನ ಕೇರಿಯ ಮಕ್ಕಳು
ಯಾವುದೋ ಉಪಗ್ರಹದ ಜೀವಿಗಳಂತೆ
ಸದಾ ನಗುತ್ತಿರುತ್ತವೆ. ಇನ್ನೊಂದು ಕೇರಿಯ
ಮಕ್ಕಳ ನೋಡಿ,
ನನಗೆ ಖುಷಿ ಇವು ಚಂದ್ರ ಬೆಳಕನ್ನೇ
ಹಿಡಿಯುವುದನ್ನ ನೋಡಿ
ರಕ್ತ ಪರೀಕ್ಷಿಸಬೇಕಿಲ್ಲ
ನನ್ನ ದೇಶದ ಜನರ
ಕಾಯಿಲೆ ಏನೆಂದು ನನಗೆ ಗೊತ್ತು
ಬೇಕಾಗಿರುವುದು ಅವರಿಗೆ
ಮುಗುಳ್ನಗೆಗೆ, ಒಂದು ಮಾತ್ರೆ ಅಷ್ಟೆ.
ಸಾಕ್ಷಿ ತೋರಿಸುತ್ತಿದ್ದಾರೆ ಬಾಬಾ ಸಾಹೇಬರು
ತುಂಬುತೋಳಿನ ತೋರುಬೆರಳಲ್ಲಿ,
ನಾವು ಮಾತ್ರ ಕಣ್ಣು ಮುಚ್ಚಿಕುಳಿತ್ತಿದ್ದೇವೆ ಗೆಳೆಯ.
ಮರೆಯಲಾರೆ ಇತಿಹಾಸವನ್ನ,
ಮಳೆ ಬರಲಿ ಲೋಕದ ಎಲ್ಲರ ಮನೆಯಮೇಲೆ
ಪ್ರಾರ್ಥಿಸುತ್ತೇನೆ,
ನನ್ನ ಹೊಡೆದವರ ಕೈ ನೋವಾಗದಿರಲಿ ಎಂದು
ನಾನು ಮಾತ್ರ ಇರುವೆ, ಈ ನೆಲದ ಹೂವಾಗಿ.
-ಸುಬ್ಬು ಹೊಲೆಯಾರ್, ಬೆಂಗಳೂರು