ಬೆಂಗಳೂರು, ಸೆ.25: ಶೋಷಣೆಗೆ ಒಳಗಾದ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ, ರಾಜ್ಯ ಸರಕಾರಗಳು ಈಡೇರಿಸಬೇಕು ಎಂದು ಮೈಸೂರಿನ ಉರಿ ಲಿಂಗಿ ಪೆದ್ದಿ ಮಹಾ ಸಂಸ್ಥಾನ ಮಠದ ಡಾ. ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಒತ್ತಾಯಿಸಿದರು.
ಅನೇಕ, ಲಸ್, ವಿಸ್ತಾರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಧರ್ಮ ಮತ್ತು ಲೈಂಗಿಕತೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಘನ ಸರ್ವೋಚ್ಚ ನ್ಯಾಯಾಲಯ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ನೀಡಿರುವ ತೀರ್ಪನ್ನು ಅನುಷ್ಠಾನ ಗೊಳಿಸಬೇಕು ಎಂದು ಹೇಳಿದರು.
ಶೀಘ್ರ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಅಗತ್ಯ ಬಿದ್ದರೆ ಈ ಸಮುದಾಯದ ಮೂಲ ಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡಲು ತಾವು ಸಿದ್ಧ ಎಂದು ತಿಳಿಸಿದರು
ಈ ಲೈಂಗಿಕ ಅಲ್ಪಸಂಖ್ಯಾತ ಶೋಷಿತ ಸಮುದಾಯದ ಸಂಕಷ್ಟಗಳು ವ್ಯವಸ್ಥೆಗೆ ಅರ್ಥವಾಗುವರೆಗೂ ಇವರ ದನಿಗೆ ದನಿಯಾಗಿರುವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿದರು, ಹಿಂದುಳಿದ ವರ್ಗಗಳ ಎಲ್ಲ ಮಠಾಧೀಶರರ ಸಹಕಾರ ಪಡೆದು ಈ ಸಮುದಾಯದ ಕುರಿತು ದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.
ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ, ರಂಗ ಕಲಾವಿದೆ, ಬರಹಗಾರ್ತಿ ಎ ರೇವತಿ ಮಾತನಾಡಿದರು.
ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮ ಗುರುಗಳು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕ್ಷತಾ ಕೆ ಸಿ ಮಾತನಾಡಿ ನನ್ನ ದೇಹ ನನ್ನ ಹಕ್ಕು , ನನ್ನ ಲೈಂಗಿಕತೆ ನನ್ನ ಹಕ್ಕು, ನನ್ನ ಜೀವನ ನನ್ನ ಹಕ್ಕು ಎಂದು
ಹೇಳಿದರು.
*****