ಮಾನವೀಯತೆಯ ಮಹಾಕವಿ ಡಾ.ಸಿದ್ಧಲಿಂಗಯ್ಯ -ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್

ಶಿವಮೊಗ್ಗ, ಸೆ. 26: ವಿರೂಪಗೊಂಡಿರುವ ಸಾಮಾಜಿಕ ಸಂರಚನೆಯನ್ನು ಸುಸ್ವರೂಪಕ್ಕೆ ಪರಿವರ್ತನೆ ಮಾಡುವ ಶಕ್ತಿ ಸಿದ್ಧಲಿಂಗಯ್ಯ ಅವರ ಬರಹ ಮತ್ತು ಬದುಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಡಾ.ಸಿದ್ದಲಿಂಗಯ್ಯ ಅವರ ಸಾಹಿತ್ಯ ಮತ್ತು ಸಾಮಾಜಿಕ‌ ಕಳಕಳಿ’ ವಿಷಯದ ಕುರಿತು ಅವರು ಮಾತಾಡಿದರು.
ಶ್ರಮಜೀವಿಗಳ ಅಂತರಂಗ ಮತ್ತು ಬಹಿರಂಗದ ನೋವುಗಳನ್ನು ಅನಾವರಣಗೊಳಿಸಿರುವ ಡಾ. ಸಿದ್ದಲಿಂಗಯ್ಯ ಅವರು ವೃಷ್ಟಿ ಮತ್ತು ಸಮಷ್ಟಿಯ ಸಂವರ್ಧನೆಗಾಗಿ ಹಗಲಿರುಳು ದುಡಿದ ಮಹನೀಯರು‍ ಎಂದು ಹೇಳಿದರು.
ಶೋಷಕರು ಮತ್ತು ಶೋಷಿತರ ಮನಪರಿವರ್ತನೆಯಾಗುವಂಥ ಸಾಹಿತ್ಯ ನೀಡಿ, ಸಾಮರಸ್ಯ ಮನೋಧರ್ಮ ಓದುಗರೊಳಗೆ ನೆಲೆಯಾಗುವಂತೆ ಮಾಡಿದ ಶ್ರೇಷ್ಠ ಮಾನವೀಯತೆಯ ಮಹಾಕವಿ  ಎಂದು‌ ಬಣ್ಣಿಸಿದರು.
ಕರ್ನಾಟಕ‌ ಸಂಘದ ಅಧ್ಯಕ್ಷ ಎಚ್ ಡಿ. ಉದಯ ಶಂಕರ ಶಾಸ್ತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ. ಆಶಾಲತಾ ಎಂ, ಕನ್ನಡ ಪ್ರಾಧ್ಯಾಪಕ ಡಾ. ಚನ್ನೇಶ್, ಕಾರ್ಯಕಾರಿ ಸಮಿತಿ ಸದಸ್ಯರು, ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


*****