ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಎಂದಿಗೂ ಅರ್ಥವಾಗದ ಒಗಟಾಗಿ ಕಾಡುವ ನಮ್ಮದೇ ಮನಸ್ಥಿತಿಗಳ ಕತೆ. ನಾವೆಲ್ಲರೂ ಶಾಲಾದಿನಗಳಲ್ಲಿ ಅನುಭವಿಸಿರುವ ಒಂದು ನಿತ್ಯದ ಘಟನೆಯ ಸುತ್ತ ಸುತ್ತುವ ಈ ಕವಿತೆಯಲ್ಲಿ ಅರಿಯಲಾಗದ ಎಷ್ಟೆಲ್ಲಾ ಬದುಕಿನ ಸತ್ಯಗಳಿವೆ. ಅರ್ಥೈಸಲಾಗದ ಮನಸಿನ ತತ್ವಗಳಿವೆ. ಏನಂತೀರಾ..?
ಪ್ರೀತಿಯಿಂದ
-ಎ.ಎನ್.ರಮೇಶ್. ಗುಬ್ಬಿ.👇
ವಿಸ್ಮಯ ಒಗಟು..!
ಬೆಳಿಗ್ಗೆ ಶಾಲೆ ಆರಂಭ ಸಮಯದಲಿ
ಬೆಲ್ಲು ಬಾರಿಸಲು ಕೋಲು ಹಿಡಿದು
ಬರುವ ಜವಾನನ ಕಂಡಾಗ…
ಬಾಡುವುದು ಕುಣಿವ ಮಕ್ಕಳ ಆನನ.!
ಮಕ್ಕಳಿರಲಿ ಕೆಲವು ಶಿಕ್ಷಕ ಸಿಬ್ಬಂದಿಗೂ
ಅದೇನೋ ಬೇಸರ ತಾಪ ಅಸಹನ.!
ಸಂಜೆ ಶಾಲೆ ಮುಕ್ತಾಯ ವೇಳೆಯಲಿ
ಬೆಲ್ಲು ಬಾರಿಸಲು ಕೋಲು ಹಿಡಿದು
ಬರುತಿರುವ ಜವಾನನ ಕಂಡಾಗ…
ಅರಳುವುದು ಖುಷಿಯಲಿ ವದನ.!
ಮಕ್ಕಳಿರಲಿ ಶಾಲೆಯ ಎಲ್ಲರೊಳಗೂ
ಅದೆಂತ ಸಂತಸ ಸುಗ್ಗಿ ಸಂಚಲನ.!
ಅದೇ ಮಕ್ಕಳು, ಅದೇ ಸಿಬ್ಬಂದಿ
ಅದೇ ಕೋಲು, ಅದೇ ಜವಾನ
ಅದೇ ಶಾಲೆ, ಅದೇ ಬೆಲ್ಲು
ಅದೇ ಢಣಢಣ ಸದ್ದಿನ ನಾದ
ಬೆಳಿಗ್ಗೆ ನರಳುವ ವದನಗಳು
ಸಂಜೆಗರಳಲೇನು ಕಾರಣಗಳು.?
ಬೆಳಗಿನ ಅಸಹನೀಯ ಆ ನಾದ
ಸಂಜೆ ವೇಳೆಗೆ ನಲಿವಿನ ನಿನಾದ
ನೋವು ನಲಿವುಗಳೆನ್ನುವುದು
ಸಂತಸ ಸಂಕಟಗಳೆನ್ನುವುದು
ನೋಡುವ ಮನಸ್ಥಿತಿ ಪ್ರಕಾರವೋ?
ಓಡುವ ಕಾಲದ ಚಮತ್ಕಾರವೋ?
ಸುಖದುಃಖ ದುಮ್ಮಾನ ಸಮ್ಮಾನ
ಆಸೆ ನಿರಾಸೆ ಆತಂಕ ಸಮಾಧಾನ
ಬಹಿರಂಗ ಸ್ಥಾನಮಾನದಲ್ಲಿಹುದೋ?
ಅಂತರಂಗ ಧ್ಯಾನದಲ್ಲಿಹುದೋ.??
ವಸ್ತು ವಿಷಯ ಹೂರಣದಲ್ಲಿಹುದೋ?
ಆಂತರ್ಯದ ರಿಂಗಣದಲ್ಲಿಹುದೋ.??
-ಎ.ಎನ್.ರಮೇಶ್. ಗುಬ್ಬಿ
*****