ಹೊಸಪೇಟೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ: ವಿಜಯನಗರ ಉತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ -ವಿಶೇಷಾಧಿಕಾರಿ ಅನಿರುದ್ಧ ಶ್ರವಣ್

ವಿಜಯನಗರ (ಹೊಸಪೇಟೆ),ಸೆ. 28: ಅ.2 ಮತ್ತು 3ರಂದು ನಡೆಯಲಿರುವ ವಿಜಯನಗರ ಉತ್ಸವದ ಸಿದ್ಧತಾ ಕಾರ್ಯಗಳನ್ನು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಪರಿಶೀಲಿಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು ಅಗತ್ಯ ಸಿದ್ಧತೆಗಳನ್ನು ಕೂಡಲೇ ಕೈಗೊಳ್ಳುವಂತೆ ಜವಾಬ್ದಾರಿ ವಹಿಸಲಾಗಿರುವ ವಿವಿಧ ಇಲಾಖೆಗಳ‌ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛತೆ,ಭದ್ರತೆ, ಗಣ್ಯರು ಮತ್ತು ಕಲಾವಿದರಿಗೆ ಮಾಡಲಾದ ವಸತಿ ವ್ಯವಸ್ಥೆ ಸೇರಿದಂತೆ ಇತರೆ ಸಿದ್ಧತೆಗಳ ಪ್ರಗತಿಯನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ನಗರದ ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯ ರಥ ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಈ ಸಾಂಸ್ಕ್ರತಿಕ ಮೆರವಣಿಗೆಯಲ್ಲಿ ಸುಮಾರು 80ರಿಂದ ೧೦೦ ತಂಡಗಳು‌ ಭಾಗವಹಿಸಲಿವೆ.ಎಲ್ಲಾ ತಂಡಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ನೋಡಿಕೊಳ್ಳಬೇಕು ಎಂದರು.
ವೇದಿಕೆ ಪಕ್ಕದಲ್ಲಿ 30 ಮಳಿಗೆಗಳು: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ವೇದಿಕೆ ಪಕ್ಕದಲ್ಲಿ 30 ಮಳಿಗೆಗಳನ್ನ ಹಾಕಲಾಗುತ್ತಿದೆ. ಇದರಲ್ಲಿ 10ಮಳಿಗೆಗಳು ಸರಕಾರಿ ಇಲಾಖೆಗಳಿಗೆ ಮೀಸಲಿಟ್ಟು,ಉಳಿದವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತದೆ‌. ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರದ್ದಾಗಿದೆ ಎಂದು ಅನಿರುದ್ಧ ಶ್ರವಣ್ ಅವರು ಹೇಳಿದರು.
ಜನರು ಕಾರ್ಯಕ್ರಮ ನಡೆಯುವುದಕ್ಕಿಂತ ಮುಂಚೆ ಬೆಳಗ್ಗೆಯಿಂದ ಸಂಜೆಯವರೆಗೆ ಮಳಿಗೆಗಳ ಹತ್ತಿರ ಬಂದು ವೀಕ್ಷಿಸಬಹುದಾಗಿದೆ. ಕಾರ್ಯಕ್ರಮ ಆರಂಭವಾದ ನಂತರ ಪಾಸ್ ಇದ್ದವರು ಮಾತ್ರ ನೋಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಕಡ್ಡಾಯ ಕೋವಿಡ್ ನಿಯಮಗಳನ್ನು ಪಾಲಿಸಿ: ಕಡ್ಡಾಯವಾಗಿ ಕೋವಿಡ್ ನಿಯಮವಾಳಿಗಳನ್ನು ಈ ಕಾರ್ಯಕ್ರಮದಲ್ಲಿ ಪಾಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಹಾಜರಾಗುವವರಿಗೆ ಥರ್ಮಲ್ ಸ್ಕಾನಿಂಗ್ ಮಾಡಿ,ಸ್ಯಾನಿಟೈಸಿಂಗ್ ಮಾಡಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು ಎಂದರು.
ನಗರದಲ್ಲಿ ದೀಪಗಳ ಅಲಂಕಾರ, ಸಿಡಿಮದ್ದುಗಳ ಚಿತ್ತಾರ,ತೆರೆದ ಬಸ್ಸುಗಳಲ್ಲಿ ಭುವನೇಶ್ವರಿ ದೇವಿ ಹಾಗು ವೇಷಧಾರಿ ಗಳ ಮೆರವಣಿಗೆ,ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕುರಿತು ಚರ್ಚಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಪಾಸ್ ಗಳ‌ನ್ನು ನೀಡುವುದು,ಅಂಬ್ಯುಲೆನ್ಸ್ ಗಳನ್ನು ಹೆಚ್ಚುವರಿ ಕಾಯ್ದಿರಿಸುವುದು.ಎನ್ ಸಿಸಿ ವಿಧ್ಯಾರ್ಥಿಗಳು ಹಾಗು ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಯಕ್ರಮಕ್ಕೆ ನಿಯೋಜಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗದ ದಂಡಾಧಿಕಾರಿ ಸಿದ್ದರಾಮೇಶ್ವರ , ಹೊಸಪೇಟೆ ಮತ್ತು ಹಂಪಿ ಡಿವೈಎಸ್ಪಿಗಳಾದ ವಿಶ್ವನಾಥ ಕುಲಕರ್ಣಿ, ಕಾಶಿ,ತಹಶಿಲ್ದಾರ್ ವಿಶ್ವನಾಥ, ಪುರಸಭೆ ಆಯುಕ್ತ ಮನ್ಸೂರದ ಅಲಿ, ತಾಲ್ಲೂಕು ವೈದ್ಯಾಧಿಕಾರಿ ಭಾಸ್ಕರ್ ಹಾಗೂ ಸಲೀಂ ಹಾಗೂ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
*****