ಆಚರಿಸಿಕೊಳ್ಳಬೇಕಿದೆ…….
–
ಒಂದೊಮ್ಮೆ ನಾನು
ಆಚರಿಸಿಕೊಳ್ಳಬೇಕಿದೆ
ನನ್ನ ಸಾವಿನ ದಿನವೊಂದನು
ಬೇಕಾದವರು, ಬೇಡದವರು
ಬಂಧುಗಳಾಗದಿದ್ದರೂ ಬಂಧುಗಳಾದವರು,
ಬಂಧುಗಳಾಗಿಯೂ ಬಂಧುಗಳಾಗದವರು
ಒಂದು ನಿಟ್ಟುಸಿರು ಚೆಲ್ಲಿ
ಹೋಗುವವರು
ಮನದೊಳಗೇ ನೆನೆನೆನೆದು ಅಳುವವರು
ಎಲ್ಲರೂ ಬಂದು ಹೋಗುವಂಥ
ಚಂದದ ಸಾವಿನ ದಿನವೊಂದನು
ಆಚರಿಸಿಕೊಳ್ಳಬೇಕಿದೆ ನನಗೆ
–
ಗೆಳೆತನದ ಅರ್ಥ ತಿಳಿಸಿದವರು
ಗೆಳೆತನದ ಅರ್ಥವನ್ನೇ ಕಳೆದವರು
ಬೇಕಿಲ್ಲದಿದ್ದರೂ
ಭಾರವಾದ ಹೆಜ್ಜೆಗಳನ್ನೂರುತ್ತ
ಬರುವವರು
ಹೆಜ್ಜೆಗಳಿಗಿಂತ
ಮನಸನ್ನೇ ಓಡಿಸುವಂತಹ
ಸುಂದರ ಮನಸಿನವರು
ಮನದೊಳಗೆ ಖಾಲಿಯಾಗಿದ್ದರೂ
ಎಲ್ಲರು ನೋಡಲೆಂದೇ ಕಣ್ಣಂಚಿನಲ್ಲಿ ಹನಿಯ
ತರುವವರು
ಬದುಕಿರುವವರೆಗೂ
ಬದುಕಲು ಬಿಡದವರು
ಬದುಕು ಮುಗಿದೇ ಹೋದ ಮೇಲೆ
ಇನ್ನೂ ಬದುಕಬೇಕಿತ್ತು ಎಂದು
ಲೊಚಗುಡುವ ಹಲ್ಲಿಯಂಥವರು
ಬರಬೇಕು ಎಲ್ಲರೂ ಬರಬೇಕು
ಅಂಥ ಸಾವಿನ ದಿನವೊಂದನು
ಆಚರಿಸಿಕೊಳ್ಳಬೇಕಿದೆ ನನಗೆ
–
ಕನಸುಗಳ ಕೆಡಿಸಿದವರು
ಕುಸಿದೇ ಹೋಗಿದ್ದ ಮನಸಿಗೊಂದು
ಚಂದದ ಬಣ್ಣ ತುಂಬಿ
ಉಸಿರೂದಿದವರು
ಪ್ರಪಾತದಂಚಿಗೆ ನೂಕಿ
ಮೋಜು ನೋಡಿ
ಕೈಚಾಚುವ ನಟನೆ ಮಾಡಿದವರು
ಯಾರಿಲ್ಲವೆಂದುಕೊಂಡ
ಸಮಯದಿ
ನಿಜವಾಗಿ ಬದುಕಿಸಿದವರು
ಬರಲೇಬೇಕು
ಅಂಥ ಸಾವಿನ ದಿನವೊಂದನು
ಆಚರಿಸಿಕೊಳ್ಳಬೇಕಿದೆ ನನಗೆ
–
ಕಣ್ಮುಚ್ಚಿದ್ದರೂ
ಎಲ್ಲ ನೋಡುವ ಹಾಗೆ
ಕಿವಿ ಇಲ್ಲದಿದ್ದರೂ
ಎಲ್ಲ ಕೇಳುವ ಹಾಗೆ
ಚಲನೆ ಇರದಿದ್ದರು
ಎಲ್ಲರ ಪಕ್ಕ
ನಿಂತು ಕೂತು
ಅರಿಯುವ ಹಾಗೆ
ಆಚರಿಸಿಕೊಳ್ಳಬೇಕಿದೆ ನನಗೆ
ಸಾವಿನ ದಿನವೊಂದನು
-ಸಿದ್ಧರಾಮ ಕೂಡ್ಲಿಗಿ