ಇಳಕಲ್ ನಲ್ಲಿ ಮಿಂಚಿದ ‘ದನ ಕಾಯುವವರ ದೊಡ್ಡಾಟ’: ಸಭಿಕರನ್ನು ನಗೆಗಡಲಿನಲ್ಲಿ ತೇಲಾಡಿಸಿದ ಬಳ್ಳಾರಿಯ ರಂಗ ಪ್ರತಿಭೆಗಳು

ಬಳ್ಳಾರಿ, ಸೆ. 28: ಬಾಗಲಕೋಟೆಯ ಇಳಕಲ್ ಪಟ್ಟಣದ ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ಜರುಗಿದ ನಾಟಕೋತ್ಸವ-2021 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಬಳ್ಳಾರಿಯ ರಂಗಪ್ರತಿಭೆಗಳು ತಮ್ಮ ಅಭಿನಯದ ಮೂಲಕ ಮಿಂಚಿದರು.
ಇಳಕಲ್ಲು ಪಟ್ಟಣದ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ರಂಗಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಾಂಸ್ಕೃತಿಕ ಸಂಭ್ರಮದಲ್ಲಿ ಭಾನುವಾರ ಸಂಜೆ ಮಹಾದೇವತಾತ ಕಲಾ ಸಂಘ ಹಂದ್ಯಾಳು ಇವರು ಅಭಿನಯಿಸಿದ ಹಾಸ್ಯಭರಿತ ನಾಟಕ “ದನ ಕಾಯುವವರ ದೊಡ್ಡಾಟ” ರಂಗಾಸಕ್ತರನ್ನು ನಗೆಗಡಲಿನಲ್ಲಿ ತೇಲಾಡಿಸಿತು.
ರಂಗಕರ್ಮಿ ದಿ.ಶಿವಶಂಕರನಾಯ್ಡು ವಿರಚಿತ ನಾಟಕವನ್ನು ನಿರ್ದೇಶಿಸಿರುವ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರು ತಮ್ಮ ಮಾತಿನ ಚಾಕಚಾಕ್ಯತೆಯಿಂದ ಸಾರಥಿ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು.
ಗೌಡನಾಗಿ ಮಹಾಂತೇಶ ಗಜೇಂದ್ರಗಡ, ಗಣೇಶನಾಗಿ ಕಪ್ಪಗಲ್ಲು ಚಂದ್ರಶೇಖರ ಅಚಾರ್, ದುಶ್ಯಾಸನ ಪಾತ್ರಧಾರಿ ಪಾರ್ವತೀಶ್ ಗೆಣಿಕೆಹಾಳು ಅವರ ಅಭಿನಯ ಗಮನ ಸೆಳೆಯಿತು.
ದುರ್ಯೋಧನನಾಗಿ ಅಮರೇಶ್ ಹೆಚ್ ಎಂ, ಕೃಷ್ಣನಾಗಿ ಶಿಕ್ಷಕ ಎರಿಸ್ವಾಮಿ, ಭೀಮನ ಪಾತ್ರದಲ್ಲಿ ಜಡೇಶ್ ಎಮ್ಮಿಗನೂರು, ನಕುಲನಾಗಿ ಸೂರಜ್, ಸಹದೇವನಾಗಿ ವಿಶೇಷ ಚೇತನ ಸುಂಕಪ್ಪ, ಹಾಗೂ ದ್ರೌಪತಿಯಾಗಿ ಮೌನೇಶ್ ಕಲ್ಲಹಳ್ಳಿ, ಶಿಕ್ಷಕಿಯಾಗಿ ಉಮಾರಾಣಿ ಬಾರಿಗಿಡದ ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿದರು
ಸಂಗೀತ ಬಳಗ: ಕ್ಯಾಷಿಯೋವನ್ನು ಬಸಲಿಂಗಪ್ಪ, ಪ್ಯಾಡ್ ನ್ನು ಗುರು ಸಪ್ಪಂಡಿ .ನುಡಿಸಿದರು.
ಈ ಬಾರಿಯ ಪ್ರದರ್ಶನದ ವಿಶೇಷವೆಂದರೆ ನಾಟಕ ಸಭಿಕರನ್ನು ಮನೋರಂಜಿಸುವುದರ ಜತೆಗೆ ಶಿಕ್ಷಣ, ಆರೋಗ್ಯ(ಕರೋನಾ)ದ.‌‌‌‌‌‌‌‌‌‌ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.


ನಾಟಕಕ್ಕೆ ಮುನ್ನ ಬಳ್ಳಾರಿಯ ಜಾನಪದ ಕಲಾವಿದ ಜಡೇಶ್ ಎಮ್ಮಿಗನೂರು ಇವರಿಂದ ಜಾನಪದ ಗೀತೆಗಳ ಗಾಯನ ಹಾಗೂ ಹಾಸ್ಯ ಕಲಾವಿದ, ಶಿಕ್ಷಕ ಎರಿಸ್ವಾಮಿ ಹಾಸ್ಯ ಕಾರ್ಯಕ್ರಮ ಹಾಗೂ ಮೌನೇಶ್ ಕಲ್ಲಹಳ್ಳಿ ಅವರಿಂದ ನೃತ್ಯ ಕಾರ್ಯಕ್ರಮ ರಂಗ ಪ್ರಿಯರ ಮನ ಸೆಳೆಯಿತು.            ನಾಟಕ ವೀಕ್ಷಿಸಿ ಹರ್ಷಿಸಿದ  ಇಳಕಲ್ ಪೊಲೀಸ್ ಇನ್ ಸ್ಪೆಕ್ಟರ್ ಬಳ್ಳಾರಿಯ ಹೊಸಕೇರಪ್ಪ ಅವರ ಸ್ನೇಹರಂಗ ಸಂಸ್ಥೆಯ ಪರವಾಗಿ ಕಲಾವಿದರನ್ನು ಗೌರವಿಸಿದರು.

*****