ಅನುದಿನ ಕವನ-೨೭೬, ಕವಿ: ರಾಗಂ (ಡಾ.ರಾಜಶೇಖರ ಮಠಪತಿ), ಕವನದ ಶೀರ್ಷಿಕೆ:ಹೋಗಿ ಬನ್ನಿರಿ ಎಂದು ಹೇಳುವುದು ಹೇಗೆ?

ಹೋಗಿ ಬನ್ನಿರಿ ಎಂದು ಹೇಳುವುದು ಹೇಗೆ?

ನೀವೆಲ್ಲ ಹೋಗಿ ನಾವಷ್ಟೆ ಇದ್ದರೆ
ಬರೆಯುತ್ತಿದ್ದೆವೇನೊ ಶೋಕಗೀತೆಗಳ

ಅಲೆ ಅಲೆಯ ಸಾವಿನಲಿ ವ್ಯತ್ಯಾಸವಿಷ್ಟೆ
ನೆಲೆಯಿರದ ನೋವಿನಲಿ ಕಂಡದ್ದೂ ಅಷ್ಟೆ
ನೀವು, ಹಾರ-ಗೋರಿಗಳಲ್ಲಿ
ನಾವು, ಸರದಿಗಳಲ್ಲಿ

ಕಣ್ಣೀರ ಬರದಲ್ಲಿ ನೀವು ಬರಿದಾದಿರಿ
ಉಸಿರ ಉರಿಯಲಿ ನಾವು ಬರಬಹುದು ನಾಳೆ

ಹಾಗೇ ಉಳಿದವು ನಮ್ಮ ಪ್ರೀತಿ-ಪಾತ್ರಗಳೆಲ್ಲ
ದೋಸೆ ತೂತುಗಳಂತೆ
ಮೃತ್ಯು ಭಾರತದಲ್ಲಿ ಮಾತು ನಿಲ್ಲುವುದಿಲ್ಲ
ಆತ್ಮವಂಚನೆ ಸಂತೆ

ಸ್ವಾಮಿ,
ಮುಂಚೂಣಿಯಲಿ ನೀವು ಮೃತ್ಯು ಅರಿತವರು
ಹಿಂದಿನಲೆಯಲಿ ನಾವು ‘ಹಿಂದುಳಿದವರು’
ಒಂದೇ ಒಡಲಿಗೆ ಎರಡು ದಾರಿಗಳ ಬೇಧ
ವೇದ ಛೇದಿಸದಿರಲಿ ಎಂದಲ್ಲವೆ
ನಮ್ಮ ಸನಾತನ ವಾದ

ಉಳಿದವರು ನಾವೀಗ
ಯಾರ ‘ಇಕ್ಕುವುದು’ ಇನ್ನ್ಯಾರ ‘ಒದೆಯುವುದು’?
ಅವರ ಬದಿಗಿದ್ದೇ ನೀವು
ಎದ್ದು ಹೋದಿರಿ ಒಡೆಯ
ನಿಮ್ಮಂತ್ಯಕೂ ಈಗ ಅವರೇ ನೀತಿ-ಸಂಹಿತೆ-ಸುಖ

ನಿಮ್ಮ ಬಾಯಿಗಿದ್ದ ಮಡಿಕೆಯಲಿ
ಉಸಿರಾದರೂ ಇತ್ತು
ನಮ್ಮ ಮಾಸ್ಕಿನೊಳ ತಳಮಳಕೆ
ಸಾವು, ಸಾವಿರ ಕುತ್ತು

‘ಸಂಬೋಳಿ’ ಎಂದರೆ ಸರಿದಾದರೂ ನಿಂತರು
ನಾವೀಗ ಸಾಯಬೇಕು ನಿಮ್ಮೊಂದಿಗೆ
ಆಯುಷ್ಮಾನ್ಭವ ಎನ್ನುತ್ತಾರೆ ನಮ್ಮ ಸಂತರು

ಅವನಲ್ಲ, ಅವಳಲ್ಲ ನಾವು
ನಿಮ್ಮಂತೆ ಒಳಗಿಲ್ಲ ಅವರಂತೆ ಹೊರಗಿಲ್ಲ
ಈ ಬದುಕು ಮೃತ್ಯುವಿನಲ್ಲೋ?
ಮೃತ್ಯು ಬದುಕಲ್ಲೋ?
ಒಂದೂ ತಿಳಿಯುತ್ತಿಲ್ಲ

ಹೋಗಿ ಬನ್ನಿರಿ ಎಂದು
ಹೇಗೆ ಹೇಳುವುದೀಗ?
ಸಾವ ಸನ್ನೆಯ ಸೂತಕದ ಮನೆ ಇದು
ಯಾರೂ ಬರಬಾರದ ಜಾಗ

-ರಾಗಂ, ಬೆಂಗಳೂರು
*****