ಬಳ್ಳಾರಿ, ಅ.6: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇವರು ಸಂಯೋಜಿಸುತ್ತಿರುವ 8ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಚಿಂತಕರು ಹಾಗೂ ಕನ್ನಡ ವಿಶ್ವ ವಿದ್ಯಾಲಯ ಚರಿತ್ರೆ ವಿಭಾಗದ ಪ್ರಾಧ್ಯಾಪಕರೂ ಆದ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಯವರು ಆಯ್ಕೆಯಾಗಿದ್ದಾರೆಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅವರು ತಿಳಿಸಿದ್ದಾರೆ.
ಅ.10 ರಂದು ಭಾನುವಾರ ಆನ್ ಲೈನ್ ಮೂಲಕ ನಡೆಯುವ ಈ ಸಮ್ಮೇಳನವನ್ನು ಧಾರವಾಡದ ಇತಿಹಾಸ ಪ್ರಾಧ್ಯಾಪಕರು ಹಾಗೂ ಚಿಂತಕರೂ ಆದ ಡಾ. ಶಿವರುದ್ರ ಕಲ್ಲೋಳಕರ ಉದ್ಘಾಟಿಸುವರು. ಹಿರಿಯ ಸಾಹಿತಿ ಹಾಸನದ ಡಾ. ಬಾನು ಮುಷ್ತಾಖ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಸಮ್ಮೇಳನ ಕಾರಟಗಿಯ ಯಶಸ್ವಿ ಕಲಾಟ್ರಸ್ಟ್ ಗಾಯಕರ ತಂಡದ ಅರಿವಿನ ಹಾಡುಗಳೊಂದಿಗೆ ಆರಂಭವಾಗುವುದು. ಒಂದು ವಿಶೇಷ ಉಪನ್ಯಾಸ, ಇನ್ನೊಂದು ಸಂಕೀರಣ ಗೋಷ್ಠಿ ನಡೆಯಲಿದೆ. ಸಾಹಿತಿ ಬೀದರಿನ ಡಾ.ಜಯದೇವಿ ಗಾಯಕವಾಡ ಗೋಷ್ಟಿಯ ಅಧ್ಯಕ್ಷತೆ ವಹಿಸುವರು.
ಬೆಂಗಳೂರಿನ ಡಾ.ವಿಜಯಲಕ್ಷ್ಮಮ್ಮ, ಮೈಸೂರಿನ ಡಾ. ಆನಂದ ಕುಮಾರ, , ಹಂಪಿಯ ಕಲ್ಲಪ್ಪ. ಎಂ.ಬಿ, ಬಸವನ ಬಾಗೇವಾಡಿಯ ಡಾ. ಬಸೀರಾಬಾನು ಮೊದಲಾದ ವಿದ್ವಾಂಸರು ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸುವರು.
ಕವಿಗೋಷ್ಠಿ: ನಂತರ ನಡೆಯುವ ಕವಿಗೊಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 25 ಜನ ಕವಿಗಳು ಭಾಗವಹಿಸುವರು. ಕವಿ ಬೆಂಗಳೂರಿನ ಡಾ. ಟಿ.ಯಲ್ಲಪ್ಪ ಅವರು ಕವಿಗೊಷ್ಠಿಯ ಆಶಯ ನುಡಿಗಳನ್ನಾಡುವರು.
ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ತುಮಕೂರಿನ ಬಿದಲೋಟಿ ರಂಗನಾಥ ಅವರು ವಹಿಸುವರು.
ದಲಿತ ಸಾಹಿತ್ಯ ಪರಿಷತ್ತಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಪ್ರಯುಕ್ತ ರಾಜ್ಯದೆಲ್ಲೆಡೆ ಐದು ವಿಶೇಷ ಸಮ್ಮೇಳನಗಳನ್ನು ಆಯೋಜಿಸುವ ಆಲೋಚನೆ ಪರಿಷತ್ತಿಗಿದೆ. ಅವುಗಳಲ್ಲಿ ಇದು ಮೊದಲನೆಯದು. ಎರಡನೆಯ ತಲೆಮಾರಿನ 25 ಜನ ದಲಿತ ಲೇಖಕರ ಬದುಕು ಬರಹ ಪುಸ್ತಕ ಪ್ರಕಟಣೆ ಮತ್ತು ವಿಚಾರ ಸಂಕಿರಣಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಘಟಿಸಲಾಗುತ್ತದೆ ಎಂದು ಡಾ.ಗೊಳಸಂಗಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಡಾ. ಸೋಸಲೆ ಅವರ ಪರಿಚಯ: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಡಾ. ಚಿನ್ನಸ್ವಾಮಿ ಅವರು ಎಂ.ಎ, ಬಿಇಡಿ, ಪಿ.ಎಚ್.ಡಿ ಪದವೀಧರರು. 2001 ರಲ್ಲಿ ಮೈಸೂರು ವಿವಿಗೆ ಮಂಡಿಸಿದ ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ(1881-1940) ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಕಳೆದ 24 ವರ್ಷಗಳಿಂದ ಹಂಪಿ ಕನ್ನಡ ವಿವಿಯ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 22ಕ್ಕೂ ಹೆಚ್ಚು ಪುಸ್ತಕಗಳನ್ನು ಡಾ. ಚಿನ್ನಸ್ವಾಮಿ ಸೋಸಲೆ ಅವರು ರಚಿಸಿದ್ದು, , ಹಲವು ಸಂಶೋಧನಾ ಕೃತಿಗಳಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿರುವುದು ಹೆಗ್ಗಳಿಕೆ.
ಕಸಾಪ ನೀಡುವ ಡಾ. ಎಲ್.ಬಸವರಾಜು ಪುಸ್ತಕ ದತ್ತಿ ಪ್ರಶಸ್ತಿ, ಗುಲ್ಬರ್ಗಾ ವಿವಿಯ ಕರ್ನಾಟಕ ರಾಜ್ಯೋತ್ಸವ ಪ್ರಸಸ್ತಿ, ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಡಾ. ಎಚ್. ಎನ್ ಪ್ರಶಸ್ತಿ, ರಾಜ್ಯಮಟ್ಟದ ದಸಾಪ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ- ಪುರಸ್ಕಾರಗಳಿಗೆ ಬಾಜನರಾಗಿದ್ದಾರೆ.
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ.
*****