ಬಾಗಿಲು……..
–
ಪ್ರತಿದಿನವೂ ತೆರೆಯುತ್ತೇನೆ
ಮುಚ್ಚುತ್ತೇನೆ
ಮನೆಯ ಬಾಗಿಲನು
ಎಷ್ಟೊಂದು ಸಹಜ
ಯಾರು ಬಂದರೂ
ಮೊದಲು ಕೂಗುತ್ತಾರೆ
ತೆರೆಯದಿದ್ದರೆ
ಬಾಗಿಲು ತಟ್ಟುತ್ತಾರೆ
ಕೆಲವರು ಬಂದಂತೆಯೇ
ಮರಳಿಹೋಗುತ್ತಾರೆ
ಕೆಲವರು ಒಳಬಂದು
ತಮ್ಮ ನಗುವನ್ನೋ
ವಿಶಾದವನ್ನೋ
ಆತ್ಮದ ಹೆಜ್ಜೆಗಳನ್ನೋ
ತಮ್ಮ ಮನದ ಭಾವಗಳ
ಘಮಲನ್ನೋ
ದಾಖಲಿಸಿ ಹೋಗಿಬಿಡುತ್ತಾರೆ
ಇಲ್ಲವೆ-
ತಮ್ಮ ನಗೆಯನ್ನು
ನನ್ನನ್ನೇ ಕೆಕ್ಕರಿಸಿ
ನೋಡುವಂತೆ ಮಾಡಿ
ಕಾಣೆಯಾಗುತ್ತಾರೆ
ಎಷ್ಟೇ ಕಿತ್ತೊಗೆದರೂ
ಆ ನಗೆ ನನ್ನೆದುರೇ
ಕುಳಿತಿರುತ್ತದೆ
ಹಲ್ಲು ಕಿರಿದು
ನನ್ನನ್ನೇನು ಮಾಡುವಂತಿಲ್ಲ
ಎಂಬಂತೆ ಅಣಕಿಸುತ್ತದೆ
–
ಹೀಗಾಗಿಯೇ-
ಮನೆಯನ್ನೆಲ್ಲ ಆಗಾಗ
ಧೂಳು ಝಾಡಿಸುತ್ತೇನೆ
ಕಸ ಹೊಡೆಯುತ್ತೇನೆ
ಅಲ್ಲಲ್ಲಿ ಸಿಕ್ಕಿಕೊಂಡ
ರೇಜಿಗೆಯೆನಿಸುವ
ಜೀಡಿಯನ್ನು ಕಿತ್ತು ತೆಗೆಯುತ್ತೆನೆ
ಆದರೂ ಅದು ಹೇಗೋ
ಮತ್ತೆ ಮಗ್ಗೆ ಬಾಗಿಲು
ತೆರೆಯಲೇಬೇಕಾಗುತ್ತದೆ
ಮುಚ್ಚಲೇಬೇಕಾಗುತ್ತದೆ
ಮನೆಯಲ್ಲಿ
ಅಳು, ನಗು, ವಿಶಾದ
ನೋವು, ನಲಿವುಗಳ ಜೊತೆ
ಕಾಲ ಕಳೆಯಲೇಬೇಕಾಗುತ್ತದೆ
ಪ್ರತಿದಿನವೂ
ತೆರೆಯುತ್ತೇನೆ
ಮುಚ್ಚುತ್ತೇನೆ
ಮನದ ಬಾಗಿಲನ್ನು
-ಸಿದ್ಧರಾಮ ಕೂಡ್ಲಿಗಿ
*****