ಕವಯತ್ರಿ ಡಾ. ಜಾನಕಿ ಅವರು, ತಮ್ಮನ್ನು ಪ್ರೀತಿಯಿಂದಲೇ ಪರಿಯಿಸಿಕೊಂಡಿದ್ದಾರೆ….!
*****
ನನ್ನ ಹೆಸರು ಜಾನಕಿ.. ಮಲೆನಾಡಿನ ಮೂಲೆಯ ಒಂಟಿ ಮನೆಯಲ್ಲಿ ಒಂಭತ್ತು ಮಕ್ಕಳ ಕುಟುಂಬದಲ್ಲಿ ಕೊನೆಯವಳಾಗಿ ಜನಿಸಿದ್ದರಿಂದ ಕರು ಕೋಣಗಳು ನಾಯಿ ಬೆಕ್ಕುಗಳು ನನಗೆ ಆಟಕ್ಕೆ ಜೊತೆಗಾರರು. .
ನನ್ನ ಅಕ್ಕಂದಿರ ಪೈಕಿ ಒಬ್ಬಳಿಗೆ ಅಳು ಜಾಸ್ತಿ. ಅದಕ್ಕೆ ಅವಳಿಗೆ ಹೆಣ್ಣು ಕರುಳು ಎಂದು ತಮಾಷೆ ಮಾಡುತ್ತಿದ್ದರು.ಇನ್ನೊಬ್ಬಳಿಗೆ ಧೈರ್ಯ ಜಾಸ್ತಿ ಅವಳಿಗೆ ಗಂಡು ಕರುಳು ಎಂದು ಹೆಸರಿಟ್ಟರು. ಇನ್ನು ನಾನು.. ಮೂರು ಹೊತ್ತೂ ನಾಯಿಗಳ ಮೇಲೆ ಬಿದ್ದುಕೊಂಡಿರುತ್ತಿದ್ದೆನಲ್ಲ..ನನಗೆ ನಾಯಿ ಕರುಳು ಎಂದು ಹೆಸರಿಟ್ಟರು, ಮುಂದೆ ಅದೇ ಖಾಯಮ್ಮಾಗಿ,ನಾನು ಪಶುವೈದ್ಯ ವೃತ್ತಿಗೆ ಬಂದೆ..
1982- 87 ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನಲ್ಲಿ ಕಲಿತೆ. ನಂತರ ಮೂರು ವರ್ಷ ಬಳ್ಳಾರಿ ಜಿಲ್ಲೆ, 16ವರ್ಷ ದಕ್ಷಿಣ ಕನ್ನಡ, 10ವರ್ಷ ಹಾಸನ, 4ವರ್ಷ ಬೆಂಗಳೂರು ಹೀಗೆ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದೆ. ಈಗ IMA ವಂಚನೆ ಪ್ರಕರಣದ ವಿಶೇಷಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದೇನೆ.
ಈ ಹಿಂದೆ ಸಾಹಿತ್ಯದಲ್ಲಿ ಸ್ವಲ್ಪ ಕೆಲಸ ಮಾಡಿ ಜಾನಕಿ ಸುಂದರೇಶ್ ಎಂಬ ಹೆಸರಲ್ಲಿ 10 ಪುಸ್ತಕ ಪ್ರಕಟಿಸಿದ್ದೇನೆ. ಕೆಲವು ಕೃತಿಗಳಿಗೆ ಪ್ರಶಸ್ತಿಗಳು ಬಂದವು. ಒಂದು ಕಥೆ ಸಿನಿಮಾ ಆಯ್ತು..
ಡಾ. ಮಿನಗುಂಡಿ ಸುಬ್ರಹ್ಮಣ್ಯಂ ರವರ ಪ್ರಭಾವಕ್ಕೆ ಒಳಗಾಗಿ TA, NLP,ಮುಂತಾಗಿ ಒಂದಷ್ಟುcounselling related course ಮಾಡಿದೆ.. ಯೋಗಾಸನ, ವಿಪಸ್ಸನ, ಗಿಡ ಮರಗಳು ಆಸಕ್ತಿಯ ವಿಷಯಗಳು…. ಈಗ ಮುಂದಿನ ದಾರಿಯ ಹುಡುಕಾಟ…..!
*****
ಕವಯತ್ರಿ ಡಾ. ಜಾನಕಿ ಅವರ ‘ಮನದ ಕನ್ನಡಿ’ ಕವಿತೆ ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿದೆ.
ಮನದ ಕನ್ನಡಿ
ಎದ್ದು ಕಾಣುತಿದೆ
ಪ್ರತಿಬಿಂಬ ಮೂಡಿರುವುದು
ಮುಂದಲ್ಲ ..
ಕೆಳಗೆ..
ಮುಂದಲ ಕನ್ನಡಿ ನೋಡ ನೋಡುತ್ತಲೆ
ಮುಂದಲೆ ಹಣ್ಣಾಯ್ತು..
ಮುಂದಲ ಕನ್ನಡಿಯೊಳಗೆ
ಎಂದಿನಿಂದಲೂ ಕಂಡ
ಮುಖ ತುಸು ತುಸುವೇ ಮಸುಕಾಯ್ತು..
ಕತ್ತೆತ್ತಿ ಸೆಟೆದು ಮುಂದೆ ನೋಡಲಾರದೆ
ಕೆಳನೋಟವೆ
ಒಳ ನೋಟವಾಗುವ
ಸಮಯ ಇದು..
ಬೆಳಕಿನ ಚೌಕಟ್ಟು ಕಿರಿದಾಗಿ
ಸುತ್ತ ಕತ್ತಲು ಹಿರಿದಾಗಿ
ಕಣ್ಣೊಳಗೆ ಕತ್ತಲು ಹಿತವಾಗಿ
ಚಿರ ನಿದ್ರೆಯ ಮಡಿಲು ತಬ್ಬಲು ಮನ ಸಜ್ಜಾಯ್ತು..
ಡಾ. ಜಾನಕಿ
ಪಶುವೈದ್ಯೆ, ಬೆಂಗಳೂರು
*****