ಕವಿ ಪರಿಚಯ:
ಮರುಳಸಿದ್ದಪ್ಪ ದೊಡ್ಡಮನಿ
ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದವರು. ಪ್ರಸ್ತುತ ಗದಗ ಜಿಲ್ಲೆಯ ಹುಲಕೋಟಿಯಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಜೀವ ವಿಮಾ ಸಲಹೆಗಾರ ಮತ್ತು ಕೃಷಿಕ
ಪ್ರಕಟವಾದ ಕೃತಿಗಳು: ಮುತ್ತಿನಹನಿ(ಹನಿಗವನ ಸಂಕಲನ)
ನೆಲದ ದನಿ(ಸಂ.ಕಥಾಸಂಕಲನ),
ಹನಿ ಹನಿ ಭಾವ ದನಿ(ಹನಿಗವನ ಸಂಕಲನ),
ಮರುಳನ ಶಾಯಿರಿಲೋಕ (ಶಾಯಿರಿ ಸಂಕಲನ)
ನೋವಿನ ನೆರಳು (ಗಜಲ್ ಸಂಕಲನ).
ಜಿಲ್ಲಾಮಟ್ಟದ ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿ, ಸಾಹಿತ್ಯ ಸಮ್ಮೇಳದಲ್ಲಿ ಕವಿತಾವಾಚಿಸಿದ್ದಾರೆ. ನಾಡಿನ ಹಲವಾರು ದಿನಪತ್ರಿಕೆಗಳಲ್ಲಿ ದೊಡ್ಡಮನಿ ಅವರ ಕವಿತೆ, ಹನಿಗವಿತೆ, ಶಾಯಿರಿ, ಗಜಲ್, ಲೇಖನ ಮತ್ತುಕಥೆಗಳು ಪ್ರಕಟವಾಗಿವೆ.
*****
ಮರುಳಸಿದ್ದಪ್ಪ ಅವರ ಮೂರು ಶಾಯಿರಿಗಳು ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿವೆ….
ಶಾಯಿರಿಗಳು
(೧)
ಸುಖಾ ಅನ್ನೂದು ಹುಡಿಕೊಂಡು ಬರಲ್ಲ
ಕಷ್ಟ ಪಟ್ಟು ದುಡದರ ದುಂಡಗಾಗದಂಗ ಇರಲ್ಲ
ಬೇವರಿನ್ಯಾಗ ಬೇರಿಳದರ ಅಳಸಾಕಾಗಲ್ಲ
ಪಡಿ ಬೇಕಂದ್ರ ದುಡಿಬೇಕು ಇಲ್ಲಂದ್ರ ಮಡಿಬೇಕು.
(೨)
ನೀ ದಾರಿ ಹಿಡದು ದುಡದ್ರ ಬಾಳು ಚಂದಕ್ಕೈತಿ
ನೀತಿ ಹಂಗ ನುಡದ್ರ ನಾಲಿಗಿಗೆ ಕಿಮ್ಮತ್ತು ಸಿಗತೈತಿ
ನೋವು ನುಂಗಿ ನಡದ್ರ ನೀಲಕಂಠಗೂ
ಹೆದರಲಾರದಂಗಕ್ಕೈತಿ.
(೩)
ಮಾತಿನ್ಯಾಗ ಮನಿಕಟ್ಟವರು ಬಾಳ ಮಂದಿ ಆಗ್ಯಾರ
ಮಂದಿ ಸಂತಿ ಕೈ ಚೀಲ ಹಿಡದು ಜೀವನಾ ನೆಡಸ್ತಾರ
ಸುಳ್ಳಿನ್ಯಾಗ ಬಾಳ ಸುಖಾ ಪಡತಾರ
ಜೀವನಂದ್ರ ಖಾಲಿ ಅಂತಾ ತಿಳದಾರ
ಅದನ್ನ ತಮ್ಮಿಚ್ಚಾದಂಗ ಕುಣಸ್ತಾರ
ತಿಳದು ನಡದು ಬಾಳೆ ಮಾಡಿದರ ಸುಖವಾಗಿರತಾರ
-ಮರುಳಸಿದ್ದಪ ದೊಡ್ಡಮನಿ
ಹುಲಕೋಟಿ
*****