ಬಳ್ಳಾರಿ, ಅ.9: ಕಲಾವಿದರ ಪೋಷಣೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲ ಉದ್ದೇಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಛಯದಲ್ಲಿರುವ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಶನಿವಾರ ಏರ್ಪಡಿಸಿದ್ದ ಒಕ್ಕೂಟದ ಪದಗ್ರಹಣ ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಕಲಾವಿದರಿಗೆ ಗುರುತಿನ ಚೀಟಿ ವಿತರಿಸುವುದರಿಂದ ನಿಜವಾದ ಕಲಾವಿದರು ಯಾರು ಎಂದು ತಿಳಿಯುತ್ತದೆ. ಸರ್ಕಾರದ ಯೋಜನೆಗಳನ್ನು ಪಡೆಯಲು ಉಪಯೋಗ ಆಗುವುದರ ಜತೆ ಇಲಾಖೆಗೆ ಕಲಾವಿದರ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳು ಜರುಗಿದರೂ ಸುಲಭವಾಗಿ ಅರ್ಹ ಕಲಾವಿದರನ್ನು ಕರೆಸಿಕೊಳ್ಳಬಹುದು ಜತೆಗೆ ನಕಲಿ ಕಲಾವಿದರನ್ನು ದೂರವಿಡ ಬಹುದು ಎಂದು ಹೇಳಿದರು.
ನಕಲಿ ಸರ್ಕಾರದ ಯೋಜನೆಗಳನ್ನು ದುರ್ಬಳಕೆ ಮಾಡುವುದು ಇಲಾಖೆಯ ಗಮನಕ್ಕೆ ಬಂದಿದೆ. ಇಂತಹವರನ್ನು ದೂರವಿಡಲು ಸಹಾಯವಾಗುತ್ತದೆ.
ಒಕ್ಕೂಟದ ಕೇಂದ್ರ ಉಪಾಧ್ಯಕ್ಷ ಪುರುಷೋತ್ತಮ ಹಂದ್ಯಾಳು ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ಆನೇಕ ಕಲಾವಿದರ ಬದುಕು ಮೂರಬಟ್ಟೆಯಾಗಿದೆ. ಬಹುತೇಕರು ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂತವರನ್ನು ಸರ್ಕಾರ, ಇಲಾಖೆ ಗುರುತಿಸಿ ಸಹಾಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸದಸ್ಯತ್ವವನ್ನು ಪಡೆದುಕೊಂಡವರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ಈವರೆಗೆ ಸರ್ಕಾರ ಮಾಡದ ಕೆಲಸವನ್ನು ಒಕ್ಕೂಟ ಮಾಡಿದೆ. ಮುಂದಿನ ದಿನಗಳಲ್ಲಿ ಆದರೂ ಸರ್ಕಾರ ಗುರುತಿನ ಚೀಟಿಗಳನ್ನು ನೀಡಲು ಮುಂದಾಗಬೇಕು ಎಂದರು.
ಅಧ್ಯಕ್ಷ ವಿಜಯಕುಮಾರ್ ಸೋನಾರೆ ಮಾತನಾಡಿ, ಮುಖ್ಯಮಂತ್ರಿ ಹಾಗೂ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಕಲಾವಿದರ ಆಗು ಹೋಗುಗಳ ಬಗ್ಗೆ ಚರ್ಚಿಸಿದ್ದೇವೆ. ಮುಖ್ಯಮಂತ್ರಿ ಅವರನ್ನು ಅತಿ ಕಡಿಮೆ ಸಮಯದಲ್ಲಿ ತಲುಪಿದ ಒಕ್ಕೂಟ ಅಂದ್ರೆ ನಮ್ಮ ಕಲ್ಯಾಣ ಕರ್ನಾಟಕ .ಕಲಾವಿದರ ಒಕ್ಕೂಟ ಎಂದು ಹರ್ಷಿಸಿದರು.
ಸಹಕಾರ್ಯದರ್ಶಿ ಅಮರೇಶ್ ಹಸಕಲ್, ಜಿಲ್ಲಾಧ್ಯಕ್ಷ ಬಿ.ಗಂಗಣ್ಣ, ಹಿರಿಯ ರಂಗಭೂಮಿ ಕಲಾವಿದೆ ವೀಣಾ ಆದೋನಿ , ರಂಗ ಕಲಾವಿದರಾದ ವೀರಭದ್ರಯ್ಯ ಸ್ವಾಮಿ, ಉಮೇಶ್ ಸಂಡೂರು, ಕೃಷ್ಣರೆಡ್ಡಿ, ಲತಾಶ್ರಿ, ಕೊಳಗಲ್ ಜಗದೀಶ್ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು
*****