ಡಿ.ಎಸ್. ಚೌಗಲೆ ಅವರ ಮೂರು ಕವಿತೆಗಳು….
೧
ಒಮ್ಮೊಮ್ಮೆ ನಿನ್ನ ಮೌನವು
ಬಹುದೊಡ್ಡ ಮಾತಾಗಿ
ಸದ್ದು ಮಾಡುತ್ತದೆ .
ಭೂ ಒಡಲ ಒಳ ದನಿಯಂತೆ
ಮೌನ-ದನಿಯ ಭಾರ ಹೊರಲಾರದೆ
ನನ್ನ ಮನವು ತರಗೆಲೆಗಳಲ್ಲಿ
ಹೂತು ಹೋಗಿದೆ.
ನಾಳೆ ನೇಸರ ಸಂಗ
ಪ್ರೇಮ ಬೀಜಾಂಕುರವಾಗಲೆಂದು
೨
ಆಕೆಯನ್ನು ಒಳಗೊಳಗೆ
ಹಚ್ಚಿಕೊಂಡಿದ್ದೇನೆ.
ಖರೇ ಅರ್ಥದಲ್ಲಿ
ಅದು ಪ್ರೀತಿಯೆಂದು
ಅವಳ ಅರಿವಿಗೆ ಬರಲೇ ಇಲ್ಲ.
ನನಗೆ ಹೇಳಲಾಗಲಿಲ್ಲ.
ಈ ಮಧ್ಯೆ
ಅದು ಇನ್ನೂ ಅನಾಥವಾಗಿ
ಗಾಳಿಯಲ್ಲಿ ತೇಲುತಿದೆ.
೩
ಗಾಳಿಯಲಿ ತೇಲುವ ದನಿಗೆ
ನಿನ್ನ ಮನದಲಿ
ಗುಬ್ಬಚ್ಚಿಯಾಗಿ ಚಿವಗುಟ್ಟಿತು
ಪ್ರೇಮ
ಈ ಎಲರ ತೆರೆ ತೆರೆಯಲಿ ಕಂಡ
ನಿನ್ನ ಚೆಲುವನು ಹಿಡಿಯಲು
ಅರಸಿದಾಗ
ಅನಂತದಲಿ ತಾ
ಸೋರಿ ಹೋಗುವುದು
ಎಟುಕದೆ ರೂಹು-ಪ್ರೇಮ
-ಡಿ.ಎಸ್.ಚೌಗಲೆ, ಬೆಳಗಾವಿ
*****