ಅನುದಿನ ಕವನ-೨೮೬, ಕವಯತ್ರಿ: ರಂಹೋ, ತುಮಕೂರು, ಕವನದ ಶೀರ್ಷಿಕೆ: ರಂಹೋ ಹನಿಗವಿತೆಗಳು

ರಂಹೋ ಹನಿಗವಿತೆಗಳು….


ಒಂದು ನೋವಿತ್ತು
ನೇವರಿಸಿದೆ
ಕವಿತೆಯಾಯಿತು!


ಸಂಭ್ರಮಕ್ಕೆ / ಸಾಕ್ಷಿಯಾಗುವ /
ಬಂಧಗಳೇ /ಸಂಕಟಕ್ಕೆ /
ಅದೃಶ್ಯವಾಗುತ್ತವೆ !


ಬದುಕನ್ನು /ಹುಡುಕಿ ಹೊರಟವರಿಗೆ /
ಸಾವು/ ಎದುರಾಗದಿರಲಿ ಪ್ರಭುವೇ !
ಹಾಗೂ ಮಂಡಿಯೂರಿದವರ………….
ಕನಸು ಕಸಿಯಬೇಡ !


ಏನನ್ನೂ ಕೂಡಿಡದ/ಅಪ್ಪ /
ಅಕ್ಷರ ಕಲಿಸಿ/ಅಕ್ಷಯಾವಾಗೆಂದ !
ಅವ್ವನ ಮುಖದಲ್ಲಿ/ ಅನ್ನದ ಹಸಿವು/
ಕಾಣುವುದೇ ಇಲ್ಲ/ ಸದಾ ಹಸಿದಿರುತ್ತಾಳೆ/
ತೀರದ ಮಮಕಾರಕ್ಕಾಗಿ!


ಕಲ್ಲಿನ ಮಗ್ಗುಲಲ್ಲೇ ಹೂವರಳುತ್ತದೆ
ಕ್ರೌರ್ಯ, ಕಾರುಣ್ಯ ಒಂದೇ ದಾರಿಯಲ್ಲಿ ನಡೆದ ಹಾಗೆ!
ಕಲ್ಲು ಒಗೆದವರನ್ನು/ಶಪಿಸಬೇಕೆಂದುಕೊಂಡೆ/
ಮೆಟ್ಟುಲುಗಳು ನೆನಪಾದವು !


ಕವಿತೆ ಬರೆಯ ಬೇಕೆಂಬ
ಇರಾದೆಯೇನೂ ಇರಲಿಲ್ಲ
ಬದುಕು ಬರೆಸಿತು !


ಬಾಳು
ಸಾವರಿಯದ
ಹೂವಾಗಲಿ ಪ್ರಭುವೇ..!!

-ರಂಹೋ (ರಂಗಮ್ಮ ಹೊದೇಕಲ್)
ತುಮಕೂರು ಜಿಲ್ಲೆ.
*****