ಅನುದಿನ ಕವನ-೨೮೭, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು

ಅರ್ಥ ಇಲ್ಲದ
ಹಾಡಿಗೆ; ಸಪ್ತಸ್ವರ
ಬೇಸೂರಾದವು.

ಬಿಸಿಲ ಧಗೆ
ಬೆವರು ಹನಿ ಬಿದ್ದು
ಮಳೆ ವಾಸನೆ.

ನಿಂತ ಕೊಂಬೆಗೆ
ಕೊಡಲಿ ಏಟು; ನಿಂತು
ನಗುವ ಜನ.

ಕಡುವೈರಿಯ
ಕಣ್ಣಲೂ ಕಾಣಬೇಕು
ಪ್ರೀತಿ ಬೆಳಕು.

ಹೂವಾದುದಕೆ
ಸಾರ್ಥಕ; ಮುತ್ತುತಿವೆ
ನೂರಾರು ದುಂಬಿ.

ಕಾಸಿನಗಲ
ಕುಂಕುಮ; ಹೆಣ್ಣಿಗದು
ಶೃಂಗಾರ ಕಾವ್ಯ.

ಹದಿಹರೆಯ
ಹೊಕ್ಕಳೊಳು ಹೊಕ್ಕಂತೆ
ಕಂಬಳಿ ಹುಳ.

ಹಳಸಿಹೋದ
ಪ್ರೀತಿಯನು; ಹಸಿದ
ನಾಯಿ ನೆಕ್ಕಿತು.

ಸಾವ ಸಂಕಟ
ಕೇಳದಂತೆ;ಜೋರಾಗಿ
ಪಟಾಕಿ ಸದ್ದು.
೧೦
ನೆಲ ನಂಬಿದ
ರೈತನೆದೆ ತುಂಬೆಲ್ಲ
ಸಾಲದ ತೂತು

– ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ
*****