ಪರೀಕ್ಷೆ
ನಡೆಯುವ ದಾರಿ ಎಡವಿದಾಗಲೇ
ತಪ್ಪುಗಳು ಪಾಠವಾಗುವುದು
ಮನೆಯವರಿಂದ ದೂರವಿದ್ದಾಗಲೇ
ನಮ್ಮವರ ಪ್ರೀತಿ ಅರಿವಾಗುವುದು ….
ಎಲ್ಲ ಮರೆತು ಕಣ್ಮುಚ್ಚಿ ಕುಳಿತಾಗಲೇ
ಕನಸುಗಳು ಗರಿಗೆದರುವುದು
ಧಾವಂತದ ದಿನಗಳ ದೂಡಿದಾಗಲೇ
ನಿರಾಳತೆಗೂ ಬೆಲೆ ಸಿಗುವುದು….
ದಾರಿತೋರದೆ ದಿಕ್ಕೆಟ್ಟು ನಿಂತಾಗಲೇ
ನಂಬಿಕೆ, ಪ್ರಾರ್ಥನೆಯಾಗುವುದು
ನೋವುಗಳು ಬಿಡದೆ ಕಾಡುವಾಗ
ಪ್ರೀತಿಯ ನಿಜ ಅರ್ಥವಾಗುವುದು……
ಎಲ್ಲಾ ಭರವಸೆಗಳನ್ನೂ ಕಳೆದುಕೊಂಡು
ಬದುಕಿನ ದಾರಿ ಕಠಿಣವೆನಿಸುವಾಗ
ಎಲ್ಲರೂ ದೂರಸರಿಯುವಾಗಲೇ
ನಮ್ಮ ಗಟ್ಟಿತನದ ಪರಿಚಯವಾಗುವುದು …..
ಬದುಕಿನೆಲ್ಲಾ ವೈರುಧ್ಯಗಳೂ ಹೀಗೇ
ಹುಟ್ಟಿಕೊಂಡವು ,ನಮ್ಮ ಪರೀಕ್ಷೆಗೆಂದು
ಕತ್ತಲಿನೊಡಲಲ್ಲಿ ನಡೆದಾಗಲೇ ಕೊನೆಗೆ
ಬೆಳಕಿನೊಂದು ಕಿರಣವೂ ವರವಾಗುವುದು ……..
-ರೂಪಾ ಗುರುರಾಜ್, ಬೆಂಗಳೂರು
*****