ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 300 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ.
ಈ ಮುನ್ನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ಕರ್ನಾಟಕ ಕಹಳೆ ಡಾಟ್ ಕಾಮ್ ದಾಗಿದೆ.
ಇಂದಿನ ವಿಶೇಷ 300ನೇ “ಅನುದಿನ ಕವನ”ದ ಗೌರವಕ್ಕೆ ಸರಳ ಸಜ್ಜನಿಕೆಯ ಪ್ರೇಮಕವಿ, ಸಾಹಿತ್ಯ, ಸಂಶೋಧನಾ ವಲಯದಲ್ಲಿ ‘ ಮನಂ’ ಎಂದೇ ಜನಪ್ರಿಯರಾಗಿರುವ ಶ್ರೀ ಮಳವಳ್ಳಿ ನಂಜುಂಡಸ್ವಾಮಿ ಐಪಿಎಸ್ ಅವರ ‘ಕತ್ತಲಾಯಿತು ಜಗಕ್ಕೆಲ್ಲಾ’ ಕವಿತೆ ಪಾತ್ರವಾಗಿದೆ.
(ಸಂಪಾದಕರು:ಕರ್ನಾಟಕ ಕಹಳೆ.ಕಾಮ್)👇
*****
ಕತ್ತಲಾಯಿತು ಜಗಕ್ಕೆಲ್ಲಾ
ಕಗ್ಗತ್ತಲ ಹೊದ್ದು ಮಲಗಿತು ಈ ಭೂಲೋಕವೆಲ್ಲಾ,
ಕರಿಕತ್ತಲೆಷ್ಟೇ ಆದರೂ ನನಗೆ ಗೊತ್ತು ಸುರ ಸುಂದರಿ,
ನೀನು ಹೊದ್ದು ಮಲಗುವುದು ನನ್ನ ಮಧುರ ನೆನಪನ್ನೆ,
ನೀನು ಸೆಳೆದಪ್ಪಿ ಪವಡಿಸುವುದು ನನ್ನ ಮನವನ್ನೆ,
ನೀನು ತಲೆದಿಂಬಾಗಿಸಿ ಕೊಳ್ಳುವುದು ನನ್ನ ಮಾತುಗಳನ್ನೆ,
ನೀನು ಹಾಸಿಕೊಳ್ಳುವುದು ನನ್ನ ಮನಂ ಕವಿತೆಗಳನ್ನೆ.
ಇಂತಿರ್ಪ
ನಿನಗೆ ಕತ್ತಲು ನನ್ನ ಕನಸುಗಳ ಬೆಳಕ ನೀಡಲಿ,
ನಿನಗೆ ಇರುಳು ನಮ್ಮ ಸರಸಗಳ ನೀಡಲಿ,
ನಿನಗೆ ನಿದ್ರಾದೇವಿಯು ನಮ್ಮ ಸಲುಗೆಗಳ ಕಂತೆ ನೀಡಲಿ,
ನಿನಗೆ ಬೆಳದಿಂಗಳು ನಮ್ಮ ಒಲವ ಒಸಗೆಗಳ ನೀಡಲಿ,
ನಿನಗೆ ಶುಭರಾತ್ರಿಯಾಗಲಿ ನೀನು-ನಾನು ನಾವಾಗಲಿ,
ನಾವು ನಾವಾಗಿ ಸದಾಕಾಲ ನಲಿವಲಿ ಬಾಳಲಿ.
– ಮನಂ (ಎಂ.ನಂಜುಂಡ ಸ್ವಾಮಿ, ಐಪಿಎಸ್) ಬೆಂಗಳೂರು
*****”