ಅನುದಿನ ಕವನ-೩೦೨, ಕವಯತ್ರಿ- ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: . ‘ಯುವ ರತ್ನ’ ನಿಗೆ ನಮನ

ಇಡೀ ಕುಟುಂಬದ ಸದಸ್ಯರು ಕುಳಿತು ಸಿನಿಮಾ ನೋಡುವಂತಹ ಹತ್ತು ಹಲವು ಸದಭಿರುಚಿ ಸಿನಿಮಾಗಳ ನಾಯಕ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಚಿತ್ರ ಪ್ರಿಯರನ್ನು ಕೆಂಗೆಡಿಸಿದೆ. ಅಭಿಮಾನಿಗಳ ರೋಧನ ಮುಗಿಲು ಮುಟ್ಟಿದೆ. ಡಾ. ರಾಜ್ ಕುಟುಂಬ ಸದಸ್ಯರ ದುಃಖ ಕಟ್ಟೆ ಹೊಡೆದಿದೆ.
ಇಂತಹ ನೋವಿನ‌ ಸಂದರ್ಭದಲ್ಲಿ ರಾಜ್ಯಾದಾದ್ಯಂತ ಬರಹಗಾರರು, ಕವಿ-ಕವಯತ್ರಿಯರು ತಮ್ಮ ಬರಹಗಳ ಮೂಲಕ ಅಗಲಿದ ನಟನಿಗೆ ಅಕ್ಷರ ನಮನ ಸಲ್ಲಿಸುತ್ತಿದ್ದಾರೆ.
ಹೂವಿನ‌ಹಡಗಲಿಯ ಕವಯತ್ರಿ ಶೋಭ ಮಲ್ಕಿಒಡೆಯರ್ ಅವರು ಪುನೀತ್ ಅವರ 29 ಚಿತ್ರಗಳ ಹೆಸರಿನಿಂದ ಕವಿತೆ ರಚಿಸಿ ಅಕ್ಷರ ಗೌರವ ಸಲ್ಲಿಸಿದ್ದಾರೆ.👇

🙏”ಯುವರತ್ನ” ನಿಗೆ ನಮನ 🙏

ಮರೆಯಾಯಿತು
ದೊಡ್ಮನೆ ಮಗುವು
ಕತ್ತಲಾವರಿಸಿತು “ಮೌರ್ಯ” ನ
ಜಗವು !
“ಪೃಥ್ವಿ” ಮತ್ತು “ಆಕಾಶ” ಕ್ಕೆ
“ನಿನ್ನಿಂದಲೇ” “ಮಿಲನ”
ಎಲ್ಲರ ನಾಡಿ ಮಿಡಿತದಲ್ಲೂ
“ವಂಶಿ” ಯದೇ ಸಂಚಲನ !

“ಯಾರೇ ಕೂಗಾಡಲಿ”
ಯಾರೇ ಹಾರಾಡಲಿ
ನೀನೇ “ವೀರ ಕನ್ನಡಿಗ”
ಅಪ್ಪನ ಪ್ರೀತಿಯ ಕಿರುಮಗ
“ದೊಡ್ಮನೆ ಹುಡ್ಗ” !

ನಟನಾ ಸಾಮರ್ಥ್ಯದಲ್ಲೂ ಸೈ
ಸಮಾಜ ಸೇವೆಯಲ್ಲೂ
ನಿನ್ನ ಕೊಡುಗೈ
ವರನಟನ ಮಗ ನೀನೇ “ರಾಜಕುಮಾರ”
ನಿನ್ನ ಅಭಿಮಾನಿಗಳ
“ಮೈತ್ರಿ” ಅಪಾರ !

ಮಕ್ಕಳಿಗೆಲ್ಲಾ ನೀನೇ                                              ಪ್ರೀತಿಯ “ಅರಸು”.                                             “ಅಣ್ಣಾ ಬಾಂಡ್‌”ನ ಸರಳತೆಯೇ ಕಣ್ಣಿಗೆ ಸೊಗಸು!

ಕೋಟ್ಯಾಭಿಮಾನಿಗಳ
ಹೃದಯ ಗೆದ್ದ ” ನಟ ಸಾರ್ವಭೌಮ”
“ಬಿಂದಾಸ್” ಆಗಿ ಸಿನಿರಂಗದಲ್ಲಿ
ಮಿಂಚಿದ “ರಣ ವಿಕ್ರಮ” !

“ಅಜಯ್” “ರಾಮ್” ನಂತಹ
“ಹುಡುಗರು” ಜೊತೆಗಿದ್ದರೂ
“ಜಾಕಿ” ಗೆ “ಪವರ್” ಇದ್ದರೂ
“ಚಕ್ರ ವ್ಯೂಹ” ದಲ್ಲಿ ಬಂಧಿತನಾದೆ

“ಅಂಜನೀ ಪುತ್ರ”
ಇಷ್ಟು ಬೇಗ ಬೇಕಾಯಿತೇ
ಅಪ್ಪ – ಅಮ್ಮನ “ಅಪ್ಪು” ಗೆಯ
ಮಡಿಲು
ಇದು ಎಲ್ಲ “ಅಭಿ” ಮಾನಿಗಳ
ಒಕ್ಕೊರಲು !

ಬಾರದೂರಿಗೆ ತೆರಳಿದೆ
“ನಮ್ಮ ಬಸವ”
ನಿನ್ನ ಮಡದಿ ಮಕ್ಕಳು
ನಿನ್ನನ್ನು ಮರೆಯಲುಂಟೇ ?
ಶಿವ – ಶಿವ

“ಪರಮಾತ್ಮ” ನಲ್ಲಿ ಲೀನವಾದೆ
ಮತ್ತೆ ಹುಟ್ಟಿ ಬಾ
ಈ ಕರ್ನಾಟಕದ ಮಣ್ಣಲಿ
“ರಾಜ್ ದಿ ಶೋಮ್ಯಾನ್” ಆಗಿ
ನೆಲೆಸು ನೀ ಶಾಶ್ವತವಾಗಿ
ಅಭಿಮಾನಿಗಳ ಹೃದಯದಲ್ಲಿ !

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****