ಕನ್ನಡದ ಗಮ್ಮತ್ತು
(ಚತುರ್ಶಲಯ ಛಂದಸ್ಸಿನಲಿ)
ಕನ್ನಡ ಪದಗಳ ಜೋಡಿಸಿ ನುಡಿಯಲು
ಚಿನ್ನದ ಭಾವನೆಯುಕ್ಕುವುದು|
ಅನ್ನದ ಭಾಷೆಯ ನೆನೆಯುತ ನಡೆಯಲು
ಬನ್ನದ ಬದುಕು ಕಳೆಯುವುದು|| ೧
ಅನ್ಯರ ಭಾಷೆಗೆ ಒತ್ತನು ನೀಡುತ
ಗಣ್ಯರ ತೆರದಲಿ ಪೋಷಾಕು|
ಧನ್ಯತೆ ಮೆರೆಯಲು ತಾಯಿಯ ಭಾಷೆಯ
ಜನ್ಯದಿ ಬರುವುದು ಧೀಮಾಕು||
ಉಸಿರಲಿ ಬೆರೆತಿಹ ಕನ್ನಡ ಭಾಷೆಯ
ಬೆಸೆಯುತ ಬಾಳಲು ಸಂಪತ್ತು|
ಜಶವನು ಕಾಣಲು ಜೇನಿನ ಸಿಹಿಯನು
ವಶದಲಿ ನೀಡಿದೆ ಗಮ್ಮತ್ತು|| ೨
ಗಂಧದ ಗುಡಿಯಲಿ ಸವಿಯುತ ಕನ್ನಡ
ಚೆಂದದಿ ನುಡಿಗಳ ಧೀಮಂತ|
ನಂದದ ಜ್ಯೋತಿಯ ತೆರದಲಿ ಎನ್ನನು
ಬಂಧಿಸಿ ಮಾಡಿದೆ ಗುಣವಂತ|| ೩
ದಕ್ಷಿಣ ಕನ್ನಡ ತಂಪೆಲರೊಳಗಡೆ
ಯಕ್ಷಿಣಿಯಂತಿದೆ ಸವಿನುಡಿಯು|
ರಕ್ಷೆಯ ಮಾಡುವ ಉತ್ತರ ಕನ್ನಡ
ಕಕ್ಷದಿ ಮೆರಿಸಿದೆ ಚೆನ್ನುಡಿಯು|| ೪
ಕರುಣೆಯ ನುಡಿಯದು ಪೂರ್ವದ ಕನ್ನಡ
ಶರಣರ ಗುಡಿಯಲಿ ಮಿಂಚಿಹುದು|
ತರಣಿಯ ಅಸ್ತದ ಪಶ್ಚಿಮ ಕನ್ನಡ
ಧರಣಿಯ ಹದಯದಿ ಮಿಂದಿಹುದು|| ೫
ಶಿಲೆಗಳ ಆಲಯ ಶಾಸನ ಬಿಂಬಿಸಿ
ಮಲೆಗಳ ಚುಂಬಿತ ಕನ್ನಡ|
ಕಲೆಗಳ ಕುಂಚದಿಯರಳುತ ಕರದಲಿ
ಸೆಳೆದಿದೆ ಜನಗಳ ಕನ್ನಡ|| ೬
ಕನ್ನಡವೆಂದರೆ ತವರಿನ ಮಡಿಲಲಿ
ನನ್ನಿಯ ಭರವಸೆ ಮೂಡಿಸಿದೆ|
ಮನ್ನಿಸಿ ಮನಗಳ ಮೆರೆಯಿಸಿ ಪ್ರೀತಿಯ
ಕನ್ನಡವೆನೆ ಕುಣಿದಾಡಿಸಿದೆ|| ೭
ಹುಟ್ಟಿದ ನಾಡಿನ ಬದುಕಿನ ಭಾಷೆಯ
ಮುಟ್ಟುತ ಬಾಳುವೆ ಕನ್ನಡದಿ|
ಮೆಟ್ಟುತ ದ್ವೇಷವನಟ್ಟುತ ದಾಸ್ಯವ
ತಟ್ಟುತ ನುಲಿಯುವೆ ಕನ್ನಡದಿ|| ೮
-ಮಾಲತೇಶ ಎನ್ ಚಳಗೇರಿ
ಆಂಗ್ಲಭಾಷಾ ಶಿಕ್ಷಕರು, ಕವಿ ಲೇಖಕರು
ಸರ್ಕಾರಿ ಪ್ರೌಢಶಾಲೆ ಹಿರೇಹಳ್ಳಿ ತಾ.ಬ್ಯಾಡಗಿ ಜಿ. ಹಾವೇರಿ
*****