ಅನುದಿನ ಕವನ-೩೦೪, ಕವಯತ್ರಿ: ಮಂಜುಳಾ ಬಿ.ಕೆ, ದಾಸರಹಳ್ಳಿ, ಶಿರಾ, ಕಾವ್ಯ ಪ್ರಕಾರ: ರುಬಾಯಿ

ಕವಯತ್ರಿ ಪರಿಚಯ:
ಮಂಜುಳಾ ಬಿ ಕೆ ಅವರು ಮೂಲತಃ ತುಮಕೂರು ಜಿಲ್ಲೆಯ ಬ್ರಹ್ಮಸಂದ್ರ ಗ್ರಾಮದದವರು. ಪ್ರಸ್ತುತ ಶಿರಾ ತಾಲೂಕಿನ ದಾಸರಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಾಗಿ ಕವನ, ಕಥೆ, ಚುಟುಕು, ಹಾಯ್ಕು, ರುಬಾಯಿ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.
ಇವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಮಂಗಳೂರಿನ ಸಾಹಿತ್ಯ ಚಿಗುರು ಸಂಸ್ಥೆ ಈಚೆಗೆ ಯುವ ಕವಯತ್ರಿಗೆ ರಾಜ್ಯ ಮಟ್ಟದ ವರ್ಷದ ಕ್ರಿಯಾಶೀಲ ಬರಹಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. 2019ರಲ್ಲಿ ಇವರು ಕಾವ್ಯರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.
*****
ಇಂದಿನ ಅನುದಿನ ಕವನದ ಗೌರವಕ್ಕೆ ಮಂಜುಳಾ ಅವರ ರುಬಾಯಿ ಪಾತ್ರವಾಗಿದೆ.

ರುಬಾಯಿ

1. ಒಲವ ಪ್ರವಾಹದಲ್ಲಿ ಮನವು
ತತ್ತರಿಸಿ ನೊಂದಿದೆ ಕಂಬನಿಯು
ಹೃದಯದ ಭಾವಗಳ ಮಿಡಿತ
ಪ್ರೀತಿ ನಿರೀಕ್ಷೆಯಲ್ಲೇ ಸೋತಿಹುದು.

2. ಆಷಾಡ ವಿರಹ ದಹಿಸಿದೆ
ಶ್ರಾವಣ ತಂಗಾಳಿ ತಣಿಸಿದೆ
ಒಲವ ಹೂವು ಸೌಗಂಧ ಬೀರಿ
ಮನವು ಗರಿಬಿಚ್ಚಿ ಹಾರಿದೆ.

3. ತಪ್ಪು ಮಾಡುವುದು ಸಹಜ
ತಿದ್ದಿ ನೆಡೆಯುವ ಮನುಜ
ಬದಲಾವಣೆ ನಿನ್ನಲಿರೆ
ಅದುವೇ ಪ್ರಾಯಶ್ಚಿತ ನಿಜ.

4. ಪುಸ್ತಕದ ಜ್ಞಾನ ಮಸ್ತಕದಲ್ಲಿ ನೆಲೆಸಿದೆ
ಅಜ್ಞಾನ ಅಳಿದು ಕತ್ತಲೆಯನು ಅಳಿಸಿದೆ
ಬದುಕಿಗೆ ಬೆಳಕು ತುಂಬಿ ಅನಂತ ಕಾಲಕೆ
ದಾರಿ ತೋರಿ ನಾಳೆಗೆ ನೆಮ್ಮದಿಯ ನೆಲೆಸಿದೆ.

5. ಭವಿಷ್ಯದ ಚಿಂತೆಯಲ್ಲಿ ಸಿಲುಕಿ
ವರ್ತಮಾನದ ಸುಖವ ಅಳಿಸಿ
ಕೊರಗುವುದೇ ಬದುಕ ಸತ್ವವೇ
ಈ ದಿನದ ಸವಿಯಲ್ಲಿ ಸುಖಿಸಿ.

6. ಎದೆಯೊಳಗೆ ಸಾಧನೆ ಹಸಿವು
ಜೊತೆಯಲ್ಲಿರೆ ಶ್ರಮದ ಛಲವು
ಕರ್ತವ್ಯನಿಷ್ಠೆ ಮರೆಯದಿದ್ದರೆ
ಶತಸಿದ್ದವು ನಿನಗೆ ಗೆಲವು.

-ಮಂಜುಳ. ಬಿ. ಕೆ, ದಾಸರಹಳ್ಳಿ, ಶಿರಾ

*****