ಅನುದಿನ ಕವನ-೩೦೫, ಕವಿ: ದೇವರಾಜ್ ಹುನಸಿಕಟ್ಟಿ, ರಾಣೇಬೆನ್ನೂರು, ಕವನದ ಶೀರ್ಷಿಕೆ: ಹೃದಯ ದೀಪ

💐ಹೃದಯ ದೀಪ💐

ದೀಪಾವಳಿ ಅಂದ್ರ್
ನನ್ನ ಕಂಗಳಲಿ ಅವನ ಕಂಗಳ ದೀಪಗಳು ಬೆಳಗಿ….
ಅವನ ಕಂಗಳಲಿ ನನ್ನಕಂಗಳ ದೀಪಗಳು ಬೆಳಗಿ….
ಎದೆಯಂಗಳದಿ ಭಾವ ದೀಪಗಳು ಒಬ್ಬರದು          ಮತ್ತೊಬ್ಬರ ಎದೆಯಲ್ಲಿ ಬೆಳಗಿ……
ಪ್ರೀತಿ ಎಂಬ ಎರಡಕ್ಷರದ ಅಕ್ಷಯದ ಬೆಳಕು ಉಸಿರ       ಜೊತೆ ಬೆರೆತು….
ಉಸಿರ ನಿಂತಾಗ ಆರತದಲ್ಲ ಅದಾ…..

ದೀಪಾವಳಿ ಅಂದ್ರ್…
ನನ್ನ ಒಳಗಿನ ನಾನು ಅಳಿದು..
ಅವನೊಳಗಿನ ನಾನು ಹರಿದು..
ನನ್ನ ಒಳಗ ಅವನು ಅವನ ಒಳಗ ನಾನು ಕಾಣದಷ್ಟು ಬೆರೆತು…
ಕತ್ತಲ ಹೃದಯದಿ ಆಗಸದ ನಕ್ಷತ್ರದಂತೆ ಬೆತ್ತಲ ಬೆಳಕಾಗಿ ಕರಗಿ ಬಿಡುವ ಭಯವಿಲ್ಲದೆ ಒಬ್ಬರಿಗೊಬ್ಬರು ಉರಿದು ಬಿಟ್ಟೆವೆಲ್ಲ ಅದಾ…

ದೀಪಾವಳಿ ಅಂದ್ರ್….
ವರ್ಷಕೊಮ್ಮೆ ಬಂದ್ ಸದ್ದು ಗದ್ದಲ ಮಾಡಿ ಕಾಣೆಯಾಗದೆ..
ಪ್ರತಿ ಕ್ಷಣ ಮೈ ಮನಗಳಲ್ಲಿ ಬರೀ ಪ್ರೀತಿ ಬೆಳಕ ತುಂಬಿ…
ನನ್ನ ಎದೆಯ ಮಿಡಿತ ಅವನ ಎದೆಯ ಬಡಿತ ಅವಲಂಬಿಸಿತಲ್ಲ…. ಅದಾ….
ಇಲ್ಲಾ… ಹಗಲು ರಾತ್ರಿ ಮುಡಿದ ದೇಹದ ನರ ನಾಡಿಗಳ ನೋವಿಗೆ ಖುಷಿಗೆ ಕನವರಿಕೆಯಲ್ಲೂ ಈ ಉಸುರಿನ ಹೆಸರೇ ಉಸಿರಿತ್ತಲ್ಲ ಅದಾ…

ದೀಪಾವಳಿ ಅಂದ್ರ್ ಅಜ್ಞಾತ ಬಂಧ ಒಂದ್ ಅಗಮ್ಯವಾಗಿ ಹೃದಯದ ಪ್ರೀತಿಯಲಿ ಅರಳಿ….
ಹೃದಯದಿಂದ ಜಾರಿ ಕಂಗಳಲಿ ಹೊರಳಿದ ಖುಷಿ ದುಃಖಗಳಿಗೆ ಆಸರೆಯ ಮಿಡಿತ ಮರಳಿ…..
ಶಬ್ಧಗಳಲ್ಲಿ ಕಟ್ಟಿ ಹಾಕೋದ್ ಕಷ್ಟವಾಗಿ ಮತ್ತೆ-ಮತ್ತೆ ಕವಿ  ಕವಿತ್ವ್ ಸೋತ್ ಬಿಡುತ್ತಲ್ಲ ಅದಾ….

ದೀಪಾವಳಿ ಅಂದ್ರ್….
ಸಣ್ಣ-ಸಣ್ಣ ಮಾತಿಗೂ ಸಾಗರದಷ್ಟು ಖುಷಿ ಉಕ್ಕಿ…
ಚಿಕ್ಕ-ಚಿಕ್ಕ ನಗುವಿನ ದೀಪಗಳ ಎದೆಯ ತುಂಬಿ ಕೊಂಡು….
ಕ್ಷಣ ಮಾತ್ರ ಅಗಲಿದರೂ ಒಳಗೊಳಗೇ ಬಿಕ್ಕಿ…
ಹಚ್ಚಿದ ದೀಪಗಳು ಎದೆಯಲ್ಲೇ ಆರಿದ ಅನುಭವ ಕೊಡುತ್ತಲ್ಲ ಅದಾ…….

ಈ ದೀಪಾವಳಿ ಅಂದ್ರ್
…ಎಣ್ಣಿತಂದು ಬತ್ತಿ ಹೊಸದು ಕಡ್ಡಿ ಕೀರಿ ಉರಿಸೋದಲ್ಲ…
ಉಸಿರಿನ ಸೊಲ್ಲು ನಿಲ್ಲೋವರಿಗೂ ಒಬ್ಬರ ಎದೆಯಲ್ಲಿ ಸಿರಿಯಾಗಿ ಉರಿದು ಬಿಡೋದ್….
ಕಣ್ಣ ಮುಂದೆ ನಾನು ಕಾಣದಿದ್ದರ ಕತ್ತಲೆ ಆವರಿಸೋ ಅನುಭವ ನೀಡಿ ಬಿಡೋದ್…
ಅವರು ಕಂಡಾಗ ಜಗತ್ತು ಕತ್ತಲಾಗಿ ಹಂಗ್… ಈ ಜಗದ ಹಂಗ್ ತೊರೆದು.. ಅವರ ನೋಟದೊಳಗೆ ಬೆರತ್ ಬಿಡೋದ್….

ಈ ದೀಪಾವಳಿ ಅಂದ್ರ್ ಏನ್ ಅಂತಾ ಗೊತ್ತಿಲ್ಲ ನೋಡ್ರಿ…
ಈ ದೀಪಾವಳಿಗೂ ಏನೇನ್ ಅಲವತ್ತು ಕೊಳ್ಳೊ ಅವಸರವಿತ್ತೋ ನಾ ಕಾಣೆ… ಅವನ ನೆನಪು ಹೊತ್ತು ಹೃದಯದ ಬತ್ತಿ ಎಗ್ಗಿಲ್ಲದೆ ಉರಿದು ಒಂದಿಷ್ಟು ಸಾಲುಗಳಲ್ಲಿ ಅವನ ಪ್ರೀತಿ ಬೆಳಕ ಹರಡಿದೆ…

-ದೇವರಾಜ್ ಹುನಸಿಕಟ್ಟಿ,
ಶಿಕ್ಷಕರು. ರಾಣೇಬೆನ್ನೂರು
*****