ಹೃದಯದ ಭಾಷೆ
ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನದ ಜಗವಿದು
ಹೃದಯದ ಭಾಷೆಯ ಮರೆತು ಆಂಗ್ಲಭಾಷೆಯ ಸೊಗವಿರಲು
ಕುಸಿಯುತಿದೆ ನಮ್ಮತನವಿಂದು ಕನ್ನಡಾಂಬೆಗೆ ಬರೀ ನೋವು
ಮಾತು ಕಲಿಸಿ ಬೆಳೆಸಿದ ನಾಡದೇವಿಗೆ ಬೇಕಿಲ್ಲ ಘೋಷಣೆ ಪೂಜೆಯ ಹೂವು//
ಸ್ವಾಭಿಮಾನದ ಭಾಷೆಯಾಗಿದೆ ನಮ್ಮ ಕನ್ನಡ ಎಂದೂ
ಅನ್ನದ ನೀಡಿದ ಕನ್ನಡವ ಕಡೆಗಣಿಸುತಿಹರು ಇಂದು
ಪರಭಾಷೆಯ ಬಳಕೆಯ ಅಟ್ಟಹಾಸದಿ ನೊಂದು
ಕನ್ನಡಾಂಬೆ ಪೊರೆಯುತಿಹಳು ಕನ್ನಡ ಬಳಸಿರಿ ಎಂದು//
ಉಸಿರಾಗಲಿ ಕನ್ನಡ ಎಂದು ಸಮಾರಂಭದಿ ಮಾತ್ರ ಕ್ರಾಂತಿ
ಮರುದಿನ ಮತ್ತೆ ಕನ್ನಡತನವಿರದೆ ಬಳಸದೇ ಶಾಂತಿ
ನಮ್ಮ ನಾಡ ಹಿರಿಮೆಯ ಹೊಗಳಲು ಕನ್ನಡ ಬೇಕೆಂಬ ಭ್ರಾಂತಿ
ಕನ್ನಡ ಉಳಿಸಲು ಅದನ್ನು ಬಳಸಿದರೆ ಕನ್ನಡದ ಸಂಕ್ರಾಂತಿ //
ಕಸ್ತೂರಿಯ ಕಂಪಿನ ನಮ್ಮ ತಾಯಿ ನಾಡು
ಇದಕ್ಕಿದೆ ಭವ್ಯ ಪರಂಪರೆ ನೋಡು
ಕಲೆ ಸಾಹಿತ್ಯ ಸಂಸ್ಕೃತಿಯ ಅಭಿಮಾನದ ಬೀಡು
ಇನ್ನಾದರೂ ಎಚ್ಚತ್ತು ಕನ್ನಡಸೇವೆ ಮಾಡು//
ಕೈ ಹಿಡಿದು ಬೆಳೆಸಿದ ತಾಯಿಯ ಋಣವನೆಂದು ಮರೆಯದಿರು
ತೊದಲು ನುಡಿಯಲ್ಲಿ ಮಾತು ಕಲಿಸಿದ ನಾಡ ತೊರೆಯದಿರು
ಅನವರತ ನಾಡ ನುಡಿಯ ಸೇವೆಗೆ ಚ್ಯುತಿ ತಾರದಿರು
ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎನ್ನುತಬರೆಯುವದ ಬಿಡದಿರು//
-ಭಾರತಿ ಕೇದಾರಿ ನಲವಡೆ
ಹಳಿಯಾಳ
*****