ಇದು ಹಣದ ಗುಣವೈಶಿಷ್ಟ್ಯಗಳ ಕವಿತೆ. ಹಣದ ಗುಣವಿಸ್ಮಯಗಳ ಭಾವಗೀತೆ. ಮೂಲಭೂತ ವಸ್ತುಗಳ ನಡುವೆಯೂ ದಲ್ಲಾಳಿಯಂತೆ ಇಡೀ ಬದುಕನ್ನು ಆವರಿಸಿಕೊಂಡಿರುವ ಧನದ ಕತೆ. ಹಣ ಶುದ್ದಜಲದಂತೆ ಆಕ್ರಮಿಸುವ ಪಾತ್ರೆಯ ಆಕಾರವನ್ನು ತಳೆಯಬಲ್ಲದು. ಹಾಗೆಯೇ ಸೇರಿದವರ ಸಂಗಕ್ಕೆ ತಕ್ಕಂತೆ ರಂಗೂ ಬದಲಿಸಬಲ್ಲುದು. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇
ಹಣದ ಗುಣ.!
ಹಣ ಕಳೆಯಬಲ್ಲುದು
ಮೋಜಿನಲಿ ಮೆರೆಯುವ
ಭೋಗಿಯ ಉಡಿ ಸೇರಿದಾಗ.!
ಹಣ ಉಳಿಯಬಲ್ಲುದು
ನಿರ್ಮೋಹದಿ ನಡೆಯುವ
ಯೋಗಿಯ ಮುಡಿ ಸೇರಿದಾಗ.!
ಹಣ ಬೆಳೆಯಬಲ್ಲುದು
ಬೆವರಿನಲಿ ನೆನೆಯುವ
ಶ್ರಮಿಕನ ಬಳಿ ಸೇರಿದಾಗ.!
ಹಣ ಹೊಳೆಯಬಲ್ಲುದು
ಸೇವೆಯಲಿ ಸಂಭ್ರಮಿಪ
ಉದಾರಿಯ ಕರಸೇರಿದಾಗ.!
ಹಣ ಕೊಳೆಯಬಲ್ಲುದು
ಕೂಡಿಡುತ ಸುಖಿಸುವ
ಜಿಪುಣನ ಕಿಸೆ ಸೇರಿದಾಗ.!
ಹಣ ಹಾಲಹಲವಾಗಬಲ್ಲುದು
ಕೇಡೆಣಿಸುತ ಕುದಿಯುವ
ಕ್ರೂರಿಯ ಕೈ ಸೇರಿದಾಗ.!
-ಎ.ಎನ್.ರಮೇಶ್. ಗುಬ್ಬಿ.
*****