ಅನುದಿನ ಕವನ-೩೧೩, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಕ್ಷರಗಳು

ಅಕ್ಷರಗಳು

ಅಕ್ಷರಗಳಿಗೂ ಜೀವವಿದೆ
ಒಂದನ್ನೊಂದು ಕೈಹಿಡಿದು
ಜೊತೆಯಾಗಿ ಸಾಲಾಗಿ
ಮಕ್ಕಳಂತೆ ಹೊರಡುತ್ತವೆ
ಅವರಿವರ ಬಳಿ ಸುತ್ತ ಕುಣಿದು
ಕುಪ್ಪಳಿಸುತ್ತ ಜೀವದಾಯಿನಿಯಾಗುತ್ತವೆ
ಒಂದನ್ನೊಂದು ತಬ್ಬಿ
ಪಿಸುಮಾತಿನಲಿ ಕರಗಿ
ಎರಡು ಹೃದಯಗಳ
ಬೆಸುಗೆಯ ಬಿಸಿಗಿ ಕರಗಿ
ನೀರಾಗಿಬಿಡುತ್ತವೆ
ಸಾಧ್ಯವಾದರೆ ಸಂತಸದ
ಕಂಬನಿಯಾಗಿ ಹೊರಹೊಮ್ಮಿ
ಸಾರ್ಥಕತೆಯನ್ನೂ ಪಡೆಯುತ್ತವೆ !

ಅಕ್ಷರಗಳಿಗೆ ಜೀವವಿದೆ
ಎದೆ ಎದೆಗಳ ಮಧ್ಯೆ
ಕೈ ಕುಲುಕಿ ಗೆಳೆತನದ
ಸೇತುವೆಯಾಗಿ ಚಿರಕಾಲ
ನಡೆಯುತ್ತಿರುವಂತೆ ಬಾಗಿ ನಿಲ್ಲುತ್ತವೆ
ಗತ್ತಿನ ಠೇಂಕಾರಕ್ಕೆ ಹುರಿಮೀಸೆ ತಿರುವಿ
ಅಸಹಾಯಕರ ಬೆನ್ನ ಬಾಸುಂಡೆಯಾಗಿಯೂ
ಕಂಗೊಳಿಸುತ್ತವೆ
ಬಿಳಿ ಟೊಪ್ಪಿಗೆಗಳಡಿಯಲಿ
ಗೊಂದಲಗಳ ಗೂಡಾಗಿ
ಮೈಕಿನ ಮೂಲಕ ದಿಕ್ಕಾಪಾಲಾಗಿ
ಚದುರಿ ಗಾಳಿಯಲ್ಲಿ ಗಾಳಿಯಾಗಿ
ತೇಲಿ ಮರೆಯಾಗುತ್ತವೆ !

ಅಕ್ಷರಗಳಿಗೂ ಜೀವವಿದೆ
ಪುಟ್ಟ ಕಂಗಳ ಬೆಳಕಿನೊಳಗೆ
ಬೆಳಕಿನ ಕಿಡಿಯಾಗಿ
ಬೆಳಗುವ ದೀಪವಾಗುತ್ತವೆ
ನೋವು, ಅಪಮಾನ
ಸಿಟ್ಟು, ಅಸಹಾಯಕತೆಗಳ ತಿದಿಯ
ಅಡಿಯಲ್ಲಿ ಮಸೆದ ಅಲಗುಗಳಾಗಿ
ಝಳಪಿಸಿ ಇತಿಹಾಸವನ್ನೇ
ಬುಡಮೇಲು ಮಾಡಿಬಿಡುತ್ತವೆ
ಅದಕ್ಕೇ-
ನಾನು ಹೇಳಿದ್ದು
ಅಕ್ಷರಗಳಿಗೂ ಜೀವವಿದೆ !

-ಸಿದ್ಧರಾಮ ಕೂಡ್ಲಿಗಿ
*****