ಅನುದಿನ ಕವನ-೩೧೪, ಕವಿ: ಶಂಕುಸುತ ಮಹಾದೇವ, ರಾಯಚೂರು, ಕಾವ್ಯ ಪ್ರಕಾರ: ಗಜಲ್

ಚಿತ್ರ ಗಜಲ್

ಒಂದೇ ಜಾತಿಯಲ್ಲದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ
ಮಾತುಗಳಾಡಲು ಬಾರದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ

ಕೂಡಿ ಬಾಳಿದರೆ ಇಲ್ಲಿ ಸ್ವರ್ಗಸುಖವಿದೆ ಎಂಬುದನ್ನು ಸಾಕ್ಷೀಕರಿಸಿವೆ
ಆಲೋಚನಾಶಕ್ತಿ ಇರದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ

ಆಕಾಶಕ್ಕೆ ಏಣಿ ಹಾಕಲು ಪ್ರಯೋಜನವಿಲ್ಲವೆಂಬ ಸತ್ಯವನ್ನರಿತು ನಡೆ
ಒಂದೇ ಪ್ರಭೇದವಲ್ಲದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ

ಕುಹಕ ನುಡಿಗಳನ್ನಾಡುವವರಿಗೆ ತಿವಿದು ಕುಟುಕಿದಂತೆ ಭಾಸವಾಗಿದೆ
ಒಂದೇ ಮನೆಯಲ್ಲಿರದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ

ಮೂಕ ಜೀವಿಗಳ ಆತ್ಮೀಯ ಪ್ರೀತಿ ಮಮತೆಗೆ ದೇವ ಮನಸೋತಿಹನು
ಒಂದೇ ಆಹಾರ ಸೇವಿಸದ ನಾಯಿಗೂ ಬೆಕ್ಕಿಗೂ ಅದೆಂಥ ಅನ್ಯೋನ್ಯತೆ

-✍️ ಶಂಕುಸುತ ಮಹಾದೇವ, ರಾಯಚೂರು

*****