ಅನುದಿನ‌ ಕವನ-೩೧೯, ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ: ಕಥೆಗಳು

ಕಥೆಗಳು

ಕಥೆಗಳು ಹಿಂತಿರುಗಿ
ಹೊರಟಿವೆ ಪರಿಚಯದ ಹಾದಿಯಲಿ
ಬಿರು ಬಿಸಿಲನ್ನೂ
ಲೆಕ್ಕಿಸದೇ

ತಾನೇ ಕಟ್ಟಿದ ಮಹಲುಗಳ ಮೂಲೆಯಲ್ಲಿ ವಿಳಾಸವೇ
ಇಲ್ಲದ ಕೇರಿಗಳಲ್ಲಿ
ಉಸಿರಾಡಿದ ಕಥೆಗಳು ತಮ್ಮ
ನೆಲೆಯತ್ತ ತೆರಳುತ್ತಿವೆ

ಮುಚ್ಚಿದ ಶಾಯಿಯ ಕಾರ್ಖಾನೆಯ ಹೆಬ್ಬಾಗಿಲಿನಿಂದ
ಖಾಲಿ ಪುಟಗಳು ಮೈ
ಕೊಡವಿ ಹೊರಟಿವೆ
ಬರೆಯುವುದು ಬಹಳಷ್ಟು ಬಾಕಿಯಿದೆಯೆಂದು

ಕಥೆಗಳು ಹಿಂತಿರುಗುತ್ತಿವೆ
ಕಸದ ಬುಟ್ಟಿ ಸೇರುವ ಮುನ್ನ
ಸಾದರ ಸ್ವೀಕಾರವಾಗದೇ

ಶಾಲೆಗಳು ತೆರೆಯುತ್ತಿವೆ
ಹೆಗಲ ಮೇಲೆ ಕುಳಿತ ಕಂದನ ಕೈಯಲ್ಲಿ ಹೊದಿಕೆ ಇರದ ಪುಸ್ತಕವೊಂದು ಇಣುಕಿ ನಗುತ್ತಿದೆ

-ವೈ ಜಿ ಅಶೋಕ್ ಕುಮಾರ್, ಬೆಂಗಳೂರು
*****