ಅನುದಿನ ಕವನ-೩೨೦, ಕವಿ:ನಾಗೇಶ ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್
•••••••
ಹಾವಿಗೆ ಹಾಲೆರೆದೆ ವಿಷ ಕಕ್ಕಿತು
ಗುಳ್ಳೆನರಿಯ ಸಂಗ ಮಾಡಿದೆ ಬೆನ್ನಿಗಿರಿಯಿತು

ಎಷ್ಟು ಪ್ರೀತಿ ಕೊಟ್ಟರೂ ದ್ವೇಷ ಹಂಚುವರಿಲ್ಲಿ
ನೋವುಗಳನ್ನು ನೇವರಿಸಿದೆ ಮುಳ್ಳು ತಾಕಿತು

ಭರವಸೆಗಳನ್ನೇ ಮುರಿದು ಕೇಕೆ ಹಾಕುವರಿಲ್ಲಿ
ಹೆಗಲಿಗೆ ಹೆಗಲು ನೀಡಿದೆ ವಿಷಾದ ಎದೆಗಿಳಿಯಿತು

ಕಣ್ಣಂಚಿನ ಹನಿಗಳು ತಿಂದ ಯಾತನೆಗೆ ಸಾಕ್ಷಿ
ಸಾಧ್ಯವಾದಷ್ಟು ಒಳಿತನ್ನೇ ಬಯಸಿದೆ ಮುನಿಸು ಬೆಳೆಯಿತು

ಎಲ್ಲರಿಂದ ಬೊಗಸೆ ಬೆಳಕು ಬಯಸಿದ್ದು ನಿನ್ನದೇ ತಪ್ಪು ‘ನಾಗೇಶಿ’
ಒಲವಿಗಾಗಿಯೇ ಸದಾ ಪರಿತಪಿಸಿದೆ ತಿರಸ್ಕಾರ ದೊರಕಿತು

🌺 ನಾಗೇಶ್ ಜೆ. ನಾಯಕ