ಅನುದಿನ ಕವನ-೩೨೫, ಕವಿ:ಚಂದ್ರಕಾಂತ ವಡ್ಡು, ಬೆಂಗಳೂರು, ಕವನದ ಶೀರ್ಷಿಕೆ: ರೈತನ ಸಾಲ ನುಂಗಿತ್ತಾ

ರೈತನ ಸಾಲ ನುಂಗಿತ್ತಾ

ರೈತನ ಸಾಲ ನುಂಗಿತ್ತಾ
ರೈತನ ಸಾಲ ನುಂಗಿತ್ತಾ, ನೋಡವ್ವ ತಂಗಿ
ರೈತನ ಸಾಲ ನುಂಗಿತ್ತಾ

ಹೊಳೆಯು ಹೊಲವ ನುಂಗಿ
ಮಳೆಯು ಬೆಳೆಯ ನುಂಗಿ
ಮಣ್ಣು ತೆನೆಯ ನುಂಗಿ, ಕಣವು ಕಾಳನು ನುಂಗಿತ್ತಾ ತಂಗಿ
ರೈತನ ಸಾಲ ನುಂಗಿತ್ತಾ

ದಲ್ಲಾಳಿ ಬೆಲೆಯ ನುಂಗಿ
ಗುತ್ತಿಗೆದಾರ ರಸ್ತೆಯ ನುಂಗಿ
ಅಧಿಕಾರಿ ಪರಿಹಾರ ನುಂಗಿ, ಬ್ಯಾಂಕು ಬೆಳೆವಿಮೆ ನುಂಗಿತ್ತಾ ತಂಗಿ
ರೈತನ ಸಾಲ ನುಂಗಿತ್ತಾ

ಶಾಸಕರು ಸರ್ಕಾರ ನುಂಗಿ
ಹಣವು ಗುಣವ ನುಂಗಿ
ಅನೀತಿಯು ನೀತಿಯ ನುಂಗಿ, ಅಸತ್ಯವು ಸತ್ಯವ ನುಂಗಿತ್ತಾ ತಂಗಿ
ರೈತನ ಸಾಲ ನುಂಗಿತ್ತಾ

ಮಠವು ಭಕ್ತರ ನುಂಗಿ
ಜಾತಿಯು ಸಮಾನತೆ ನುಂಗಿ
ಪೂಜಾರಿ ನೈವೇದ್ಯ ನುಂಗಿ, ಗುಡಿಯು ದೇವರ ನುಂಗಿತ್ತಾ ತಂಗಿ
ರೈತನ ಸಾಲ ನುಂಗಿತ್ತಾ

ಎತ್ತು ಚಕ್ಕಡಿಯ ನುಂಗಿ
ಬಾರುಕೋಲು ಹೋರಿಯ ನುಂಗಿ
ಗೂಟ ಎಮ್ಮೆಯ ನುಂಗಿ, ಹುಲ್ಲು ಹಸುವ ನುಂಗಿತ್ತಾ ತಂಗಿ
ರೈತನ ಸಾಲ ನುಂಗಿತ್ತಾ

ನೋಟು ವೋಟನು ನುಂಗಿ
ಹೆಂಡ ಮಡಿಕೆಯ ನುಂಗಿ,
ಬಡ್ಡಿ ಬಂಗಾರವ ನುಂಗಿ, ನೇಣು ಗೋಣನು ನುಂಗಿತ್ತಾ ತಂಗಿ
ರೈತನ ಸಾಲ ನುಂಗಿತ್ತಾ

ರೈತನ ಸಾಲ ನುಂಗಿತ್ತಾ
ರೈತನ ಸಾಲ ನುಂಗಿತ್ತಾ, ನೋಡವ್ವ ತಂಗಿ
ರೈತನ ಸಾಲ ನುಂಗಿತ್ತಾ

-ಚಂದ್ರಕಾಂತ ವಡ್ಡು, ಬೆಂಗಳೂರು
[ಷರೀಫಜ್ಜನ ಕ್ಷಮೆ ಕೋರಿ…]
*****