ನೀನು ಮತ್ತು ಹೂ
ನಾ ಹೂವ ಇಷ್ಟಪಟ್ಟೆ;
ನೀ ಪರಿಮಳ ಹುಡುಕಿ ಹೊರಟೆ!
ನನಗೆ ಹೂವು ಸಿಕ್ಕಿತು;
ನೀನು ಸಿಗಲಿಲ್ಲ!
*
ಹೂವಾದರು ನೀನು;
ಸುಗಂಧವಾಗಲಿಲ್ಲ!
ಆಘ್ರಾಣಿಸಲು ನಾನೆಂದು ಆಸೆ ಪಡಲಿಲ್ಲ
ಎಲ್ಲ ಹೂಗಳಿಗೂ;
ಸುಗಂಧವಿರಬೇಕಿಲ್ಲ!
*
ಪ್ರೀತಿ ನಿನ್ನಲ್ಲಿತ್ತು;
ಹೂ ನನ್ನಲ್ಲಿತ್ತು!
ಮುಡಿದ ನೀನು ಹೃದಯವಾದೆ!
ನನ್ನ ಬದುಕ ಮಿಡಿತವಾದೆ!
*
ಹೂವಾದರೂ ಬಾಡಲಿಲ್ಲ;
ನನ್ನ ಹೃದಯವನೆ ಕೊಟ್ಟಿಹೆಯೆಲ್ಲ;
ಬಡಿತ ನಿಲ್ಲುವ ತನಕ…
ಹೂವಿಗು ಜೀವ!
ನನಗೂ ಜೀವನ!
*
ನೀನೇ ಹೂವೆಂದರು;
ಅಲೆದಾಡುತಿರುವೆ ಬೆನ್ನೀಡಿ!
ನಿನ್ನ ಅಂದಕೆ ನಾನೆ ಕನ್ನಡಿ!
ನಂಬಿ ಕೈ ಹಿಡಿ!
ಬದುಕಿಗಾಗು ಮುನ್ನುಡಿ!
*
ಹೂ ಆಗಬಹುದು;
ಪರಿಮಳವೂ ಆಗಬಹುದು;
ಹೂವಂತ
ಬದುಕಾಗುವುದು ಕಷ್ಟ!
ಎಲ್ಲರ ಇಷ್ಟದ
ಪರಿಮಳವಾಗುವುದೂ ಕಷ್ಟ!
-ಟಿ.ಪಿ. ಉಮೇಶ್, ಹೊಳಲ್ಕೆರೆ
*****