ಅನುದಿನ ಕವನ-೩೨೭, ಕವಿ: ದೇವರಾಜ್ ಹುಣಸಿಕಟ್ಟಿ, ರಾಣೇಬೆನ್ನೂರು, ಕಾವ್ಯ ಪ್ರಕಾರ:ಗಜಲ್

ಗಜಲ್

ಬೆತ್ತಲಾಗಲು ಕತ್ತಲೆಯಾಗಬೇಕೆಂದಿಲ್ಲ ತುಸು ಚಿತ್ತ ಚಾಂಚಲ್ಯವಿದ್ದರೆ ಸಾಕು
ಮೆತ್ತಗಾಗಲೂ ಅಧಿಕಾರ ಕಳೆದುಕೊಳ್ಳ ಬೇಕೆಂದಿಲ್ಲ ತುಸು ದೌರ್ಬಲ್ಯ ವಿದ್ದರೆ ಸಾಕು

ಸುತ್ತಲೂ ನಿನ್ನವರೆಂದು ಹೇಳುವ ವೇಷಧಾರಿಗಳು ಸಾವಿರ ಜನರಿರುವರು
ಇರಿಯಲೆಂದೆ ಕಾದು ಕುಳಿತಿರುವರು ತುಸು ನಿನ್ನಿಂದ ಲಾಭವಿಲ್ಲದಿದ್ದರೆ ಸಾಕು

ಸೈತಾನನ ಸಂತಾನರು ಎದುರಲ್ಲಿ ದುಃಖಸುವಂತೆ ನಟಿಸುವರು ಒಳಗೆ ಖುಷಿಪಡುವರು
ತುಳಿಯಲೆಂದೆ ಸಮಯಕ್ಕಾಗಿ ಕಾಯುತ್ತಿರುವರು ತುಸು ನಿನ್ನ ಭಯವಿಲ್ಲದಿದ್ದರೆ ಸಾಕು

ನಾಲಿಗೆಗೆ ಅಂಟಿದ ಬಣ್ಣ ರೂಪಗಳ ಗುರುತಿಸುವುದು ಅಷ್ಟು ಸುಲಭದ ಮಾತೇ..?ಗೆಳೆಯ
ಮುಖಕ್ಕೆ ಮುಖ ಕೊಟ್ಟು ಮಾತಾಡುವುದಿಲ್ಲ ತುಸು ನಿನಗೆ ಶಕ್ತಿಯಿಲ್ಲದಿದ್ದರೆ ಸಾಕು

ಸತ್ಕಾರ ಆದರ ತಿರಸ್ಕಾರವಾಗುವುದು ಕ್ಷಣ ಮಾತ್ರದ ಅಂತರವಲ್ಲವೇ
ಹಗಲಲು ಕತ್ತಲಾವರಿಸುವುದು ಕೈಯಲ್ಲಿ ಕಾಂಚಾಣವಿಲ್ಲದಿದ್ದರೆ ಸಾಕು

-ದೇವರಾಜ್ ಹುಣಸಿಕಟ್ಟಿ
ಶಿಕ್ಷಕರು,ರಾಣೇಬೆನ್ನೂರ್.
*****