ಗಜಲ್
ಅರ್ಥವೇ ಇರದ ದಾರಿಯಲಿ ನಡೆಯುವುದು ಬೇಡಬಿಡು
ಕಣ್ಣೇ ಇರದಿರುವಲಿ ಕನಸುಗಳ ಕಾಣುವುದು ಬೇಡಬಿಡು
–
ನೆಲದ ರೋದನ ಒಣಮರದ ಟೊಂಗೆಗಳಾಗಿ ಕೈಚಾಚಿವೆ
ಹಸಿದನಿಯೇ ಇರದ ಮರಳಿನಲಿ ಚಿಗುರುವುದು ಬೇಡಬಿಡು
–
ಬರೀ ಧೂಳಿಡಿದ ಬದುಕಿನಲಿ ಸಂಜೆಯೂ ಮಂಕಾಗಿಹುದು
ವಾಸವಿರದ ಮನೆಯಲಿ ದೀಪ ಬೆಳಗಿಸುವುದು ಬೇಡಬಿಡು
–
ನಲಿವಿನ ಕಣ್ಣಿನ ಕಪ್ಪನ್ನೇ ಕುಕ್ಕಿ ಕುಕ್ಕಿ ತಿನ್ನುತಿವೆ ಕಾಗೆಗಳು
ಖಾಲಿಯಾದ ರಂಗಮಂಟಪದಿ ನರ್ತಿಸುವುದು ಬೇಡಬಿಡು
–
ಬಿಳಿ ಕ್ಯಾನ್ವಾಸಿನಲೇ ಭ್ರಮೆಯ ಬಣ್ಣ ತುಂಬುತಿಹರು ಸಿದ್ಧ
ಬೇರೆಯವರ ವಿಷಯದಲಿ ತಲೆತೂರಿಸುವುದು ಬೇಡಬಿಡು
-ಸಿದ್ಧರಾಮ ಕೂಡ್ಲಿಗಿ
*****