ಇದು ಇಂದಿನ ದಿನಮಾನದ ಕವಿತೆ. ಪ್ರಸಕ್ತ ಕಾಲಮಾನದ ತಲ್ಲಣಗಳ ನೋವಿನ ಕತೆ. ಇಂದು ಎಲ್ಲೆಡೆ ಮಮಕಾರದ ಜೀವಜಲ ಬತ್ತುತ್ತಾ.. ಮಾನವೀಯತೆಯ ಮರ ಬರಡಾಗುತ್ತಿದೆ. ದಯೆ, ಪ್ರೀತಿ, ಕರುಣೆ, ತ್ಯಾಗ, ಕ್ಷಮೆಯೆಂಬ ಜೀವದ್ರವಗಳು ಮರೆಯಾಗುತ್ತಾ ಎಲ್ಲರ ಹೃದಯಗಳು ಕೊರಡಾಗುತ್ತಿವೆ. ಸ್ವಾರ್ಥ, ಅಸೂಯೆ, ಹಗೆ, ಮತ್ಸರ,ಅಸಹಿಸ್ಣುತೆಯೆಂಬ ಕಿಡಿಗಳು ಮೆರೆಯುತ್ತಾ ಮನಸುಗಳು ಮಸಣವಾಗುತ್ತಿವೆ. ಬದುಕುಗಳು ಕೊರಡಾಗುತ್ತಿವೆ ಎಂದು ಕವಿ ಎ.ಎನ್.ರಮೇಶ್ ಗುಬ್ಬಿ ಅವರು “ಮರಣದತ್ತ ಮರ” ಕವಿತೆಯ ಮೂಲಕ ವಿಷಾಧ ವ್ಯಕ್ತಪಡಿಸಿದ್ದಾರೆ.👇
ಮರಣದತ್ತ ಮರ.!
ಜಾತಿಯ ವಿಷಬೇರುಗಳು
ಹರಡುತ ಬುವಿಯಲ್ಲೆಲ್ಲ
ಕರಾಳವಾಗಿ ಆಳಕ್ಕಿಳಿದು
ಭದ್ರವಾಗಿ ಹಬ್ಬಿದಂತೆಲ್ಲ..
ನೀತಿಯ ಚಿಗುರುಗಳು
ಮುರುಟಿ ಉದುರುತಿವೆ.!
ಪ್ರೀತಿಯ ಕುಸುಮಗಳು
ಅರಳದೆ ಬಾಡಿಬೀಳುತಿವೆ.!
ಅಸೂಯೆ ಅಸಹಿಷ್ಣುತೆಯ
ಫಲಗಳು ಬಿರಿಯುತಿವೆ.!
ಸ್ವಾರ್ಥ ಸೇಡು ಕ್ರೌರ್ಯದ
ಮುಳ್ಳುಗಳು ಬೀಗುತಿವೆ.!
ಭೇದಭಾವ ಮಾತ್ಸರ್ಯದ
ರೆಂಬೆಕೊಂಬೆ ಟಿಸಿಲೊಡೆದಿವೆ
ದ್ವೇಷ ಕೋಮುದಳ್ಳುರಿಯ
ಬಿಳಿಲುಗಳು ತೂಗುತಿವೆ.!
ಮನುಕುಲವೆಂಬ ವೃಕ್ಷದ
ಟೊಂಗೆ ಕಾಂಡ ಎಲೆಯೆಲೆಗೂ
ಬಡಿದಿದೆ ಈಗ ಜಾತಿಯ
ಸಾಂಕ್ರಾಮಿಕ ವಿಷಮ ವ್ರಣ.!
ಮರತೇ ಹೋಗುತಿದೆ ಮರಕೆ
ಮಣ್ಣಿನ ಮಮತೆಯ ಋಣ.!
-ಎ.ಎನ್.ರಮೇಶ್. ಗುಬ್ಬಿ.
*****