ಜನಪ್ರಿಯ ಗಾಯಕ ಘಂಟಸಾಲ ಬಳ್ಳಾರಿ ಜೈಲಿನಲ್ಲಿದ್ರಾ….!? ಹೌದು ಎನ್ನುತ್ತಾರೆ ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ!

ಡಿಸೆಂಬರ್-ನಾಲ್ಕು, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ “ಘಂಟಸಾಲ” ಅವರ ಜನ್ಮದಿನ.
ಈ ಹಿನ್ನಲೆಯಲ್ಲಿ ಘಂಟಸಾಲ ಅವರ ಜೀವನ-ಗಾಯನ-ಸಾಧನೆಗಳ ಕುರಿತು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ಅವಲೋಕಿಸಿದ್ದಾರೆ. 👇

ಕೇವಲ ಐವತ್ತೆರಡೇ ವರ್ಷಗಳ ಆಯಸ್ಸು! ಮದ್ರಾಸ್ ಆಕಾಶವಾಣಿ ಶಾಸ್ತ್ರೀಯ ಸಂಗೀತಗಾರರಾಗಿ ಪಡೆದರು ಯಶಸ್ಸು!! ಚಲನಚಿತ್ರ ನೇಪಥ್ಯ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ದೇಶ-ವಿದೇಶಗಳಲ್ಲಿ ವಿಜಯಧ್ವಜ ಹಾರಿಸಿದ, ವಿಜಯ ಡಿಂಡಿಮ ಬಾರಿಸಿದ ಶ್ರೇಯಸ್ಸು!!! ಅಲ್ಪಾಯುವಿನಲ್ಲೇ ತೆಲುಗು ಕನ್ನಡ ತಮಿಳು ಮಲಯಾಳಂ ತುಳು ಕೊಂಕಣಿ ಹಿಂದಿ ಮುಂತಾದ ಭಾಷೆಗಳಲ್ಲಿ ಒಟ್ಟು ಹತ್ತು ಸಾವಿರಕ್ಕಿಂತಲೂ ಅತ್ಯಧಿಕ ಗೀತೆಗಳನ್ನು ಹಾಡಿ ದಾಖಲೆ ಸೃಷ್ಟಿಸಿದವರು. ಚಲನ ಚಿತ್ರೇತರ ಗೀತೆ-ಭಕ್ತಿಗೀತೆಗಳ ಗಾಯನದಲ್ಲಿಯೂ ಅದರಲ್ಲೂ ಭಗವದ್ಗೀತೆಯ ಅಮೋಘ ಗಾಯನದಲ್ಲಿ ಅಪಾರ ಜನಪ್ರಿಯತೆ ಪಡೆದವರು’
ಯಾರು! ಯಾರು!! ಯಾರವರು!!!
4.12.1922ರಂದು ಜನಿಸಿ-11.2.1974ರಂದು ನಾದೈಕ್ಯರಾದವರು-ಅವರೇ ನಿಜಾರ್ಥದಲ್ಲಿ “ಗಾನಗಂಧರ್ವ” ಎನಿಸಿದವರು-“ಘಂಟಸಾಲ” ಎಂದೇ ಹೆಸರಾದ ಘಂಟಸಾಲ ವೆಂಕಟೇಶ್ವರರಾವ್.
ಅವರ ಮಾಧುರ್ಯಭರಿತ ಕಂಚಿನ ಕಂಠದಲ್ಲೇ ಅದೇನೋ ಒಂದುಬಗೆಯ ವಿಭಿನ್ನ ಆಕರ್ಷಣೆ, ಜನಮನ ಸೆಳೆಯುವ ವಿಶೇಷ ಮೋಡಿಯಿತ್ತು.
ಘಂಟಸಾಲ ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ದಕ್ಷಿಣಭಾರತದ ಚಲನಚಿತ್ರ ಲೋಕದಲ್ಲಿ ಅಜರಾಮರರಾಗಿದ್ದಾರೆ. 1944-1974ರ ಕಾಲಾವಧಿಯ ಪೀಳಿಗೆಯವರಲ್ಲಿ ಘಂಟಸಾಲರ ಹಾಡುಗಳನ್ನು ಕೇಳದವರೇ ವಿರಳ.


50-60-70ರ ದಶಕಗಳ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಾರಂಭ ಮುಂಚೆ ಚಿತ್ರಮಂದಿರದೊಳಗೆ ಮಾತ್ರವಲ್ಲ ಹೊರಗೆ ಮೈಲು ದೂರದವರೆಗೆ ತೇಲಿ ಕೇಳಿ ಬರುತ್ತಿದ್ದದ್ದು ಘಂಟಸಾಲ ಅವರು ಹಾಡಿದ “ನಮೋ ವೆಂಕಟೇಶ ನಮೊ ನಮೋ ತಿರುಮಲೇಶ” ಎಂಬ ಭಕ್ತಿಗೀತೆ. ಗಣೇಶನ ಹಬ್ಬ ಬಂದರೆ ಘಂಟಸಾಲ ಹಾಡಿರುವ ಹಂಸದ್ವನಿ ರಾಗದ “ವಾತಾಪಿ ಗಣಪತಿಂ ಭಜೇಹಂ/ ವಾರಣಾಸ್ಯಂ ವರಪ್ರದಂ ಶ್ರೀ…” ಧ್ವನಿವರ್ಧಕದ ಮೂಲಕ ಮೊಳಗಲೇಬೇಕು.
ತಿರುಪತಿ ಯಾತ್ರಿಗಳಿಗೆ ಏಳೇಳು ಬೆಟ್ಟಗಳಲ್ಲೂ ಹೋದ ಹೋದೆಡೆಗಳಲ್ಲೆಲ್ಲಾ ಘಂಟಸಾಲ ದ್ವನಿಯೇ ಮಾರ್ದನಿಸುತ್ತಿತ್ತು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಘಂಟಸಾಲ ಪ್ರಖ್ಯಾತಿ ಪಡೆದಿದ್ದರು.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಗುಡಿವಾಡ ತಾಲೂಕಿನ ಚೌಟಪಲ್ಲಿ ಎಂಬ ಗ್ರಾಮ ಇವರ ಹುಟ್ಟೂರು. ಸುಪ್ರಸಿದ್ಧ ಗಾಯಕ- ಪ್ರವಚನಕಾರ ಅದರಲ್ಲೂ “ತರಂಗಂ”ಗಾನ ಪದ್ಧತಿಯಲ್ಲಿ ವಿಶೇಷ ಸ್ಥಾನ ಪಡೆದಿದ್ದ ಸೂರಯ್ಯ ಹೆಸರಿನಿಂದ ಜನಾನುರಾಗಿಯಾದ್ದ ಘಂಟಸಾಲ ಸೂರ್ಯನಾರಾಯಣರಾವ್ ಮತ್ತು ರತ್ನಮ್ಮ ದಂಪತಿ ಸುಪುತ್ರನಾಗಿ ಘಂಟಸಾಲ ವೆಂಕಟೇಶ್ವರರಾವ್ ಜನಿಸಿದರು.
೧೨ರ ಬಾಲ್ಯದಲ್ಲಿ ತಂದೆ ಸ್ವರ್ಗಸ್ಥರಾದಾಗ ಘಂಟಸಾಲ ಚಿಕ್ಕಪ್ಪ ರಾಮಯ್ಯನವರ ಆಶ್ರಯದಲ್ಲಿ ಬೆಳೆದರು.. ಸಂಗೀತಾಸಕ್ತಿಯ ಇವರು ಕಲಿಕೆಗೆ ಅವಕಾಶವಿಲ್ಲದ ಕಾರಣ ಚಿನ್ನದ ಉಂಗುರ ಮಾರಿ ಬಂದ ಹಣದಿಂದ ಚಿಕ್ಕಪ್ಪನ ಮನೆತೊರೆದು ವಿಜಯನಗರಕ್ಕೆ ಓಡಿ ಹೋಗುವಂತೆ ಪ್ರೇರೇಪಿಸಿತು. ಅಲ್ಲಿ ಮಹಾರಾಜ ಸಂಗೀತ ಮತ್ತು ನೃತ್ಯ ಕಲಾ ಕಾಲೇಜಿನಲ್ಲಿ ಪ್ರವೇಶ ಪಡೆದು ಕಠಿಣ ಪರಿಶ್ರಮದಿಂದ ’ಸಂಗೀತ ವಿದ್ವಾನ್’ ಪದವಿ ಗಳಿಸಿದರು.


ಆ ವೇಳೆಗೆ ದೇಶಾದ್ಯಂತ ಹಬ್ಬಿದ್ದ ‘ಕ್ವಿಟ್ ಇಂಡಿಯಾ ಚಳುವಳಿ’ಗೆ ಸೇರಿ, ೧೮ ತಿಂಗಳ ಸೆರೆಮನೆ ಶಿಕ್ಷೆಗೆ ಗುರಿಯಾಗಿ ಬಳ್ಳಾರಿಯ ಐತಿಹಾಸಿಕ ಅಲ್ಲಿಪುರಂ ಜೈಲು ಸೇರಿದರು. ಜೈಲಿನಲ್ಲಿ ಘಂಟಸಾಲರ ಸಹಕೈದಿಗಳಾಗಿದ್ದವರು-ನೀಲಂ ಸಂಜೀವರೆಡ್ಡಿ, ಪೊಟ್ಟಿ ಶ್ರೀರಾಮುಲು, ಸಂಗೀತಗಾರ ಸಮುದ್ರಾಲ, ಟೇಕೂರು ಸುಬ್ರಹ್ಮಣ್ಯ ಮುಂತಾದ ಗಣ್ಯ ಸ್ವಾತಂತ್ರ್ಯವೀರರು. ಘಂಟಸಾಲರು ಪ್ರತಿದಿನ ನಸುಕಿನಲ್ಲಿ ವೆಂಕಟೇಶ್ವರ ಸುಪ್ರಭಾತ ಹಾಡುತ್ತಿದ್ದರು. ಆಮೇಲೆ ದಿನದ ಬಹುಸಮಯ ದೇವರನಾಮ, ಕವಿತೆ, ದೇಶಭಕ್ತಿಗೀತೆ ಹಾಡುತ್ತಿದ್ದರು. ಜೈಲು ಸೂಪರಿಂಟೆಂಡೆಂಟ್ ಗೆ ಇವರೆಲ್ಲಿ ಪ್ರಚೋದನಾತ್ಮಕ ಕ್ರಾಂತಿ ಗೀತೆಗಳನ್ನು ಹಾಡಿ ಸ್ವಾತಂತ್ರ್ಯಪ್ರೇಮಿ ಕೈದಿಗಳಲ್ಲಿ ಕೆಚ್ಚು-ಕಿಚ್ಚು ತುಂಬಿ ಗಲಭೆ ಸೃಷ್ಟಿ ಮಾಡಿಬಿಡುತ್ತಾರೋ ಎಂಬ ಭೀತಿ! ತೆಲುಗು ಕನ್ನಡ ಬಲ್ಲ ಸಿಪಾಯಿಯೊಬ್ಬನನ್ನು ತಮ್ಮೊಂದಿಗಿರಿಸಿಕೊಂಡು ಘಂಟಸಾಲ ಏನು ಹಾಡುತ್ತಾರೆಂಬುದನ್ನು ತಿಳಿಯುತ್ತಿದ್ದರು. ಜೈಲುಶಿಕ್ಷಾವಧಿ 18ತಿಂಗಳದ್ದಾಗಿದ್ದರೂ ಐದೂವರೆ ತಿಂಗಳಲ್ಲೇ ಬಿಡುಗಡೆಯಾಯಿತು. 19.4.1943ರಂದು ಜೈಲು ಪ್ರವೇಶಿಸಿದ ಘಂಟಸಾಲ 30.9.1943ರಂದು ಸೆರೆಮನೆಯಿಂದ ಬಿಡುಗಡೆ ಹೊಂದಿದರು. ಘಂಟಸಾಲರವರು ದಕ್ಷಿಣ ಭಾರತದ ಚಿತ್ರರಂಗದ ಲೆಜೆಂಡರಿ ಗಾಯಕ-ಸಂಗೀತ ನಿರ್ದೇಶಕರಾಗಿ ಖ್ಯಾತರಾಗಲು ಜೈಲಿನಲ್ಲಿ ಪರಿಚಿತರಾಗಿದ್ದ ಸಹಕೈದಿ ಸಮುದ್ರಾಲರವರು ಪ್ರೇರಕಶಕ್ತಿಯಾದರೆಂದು ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.
ಎಚ್ಎಂವಿ ಸಂಸ್ಥೆ ಇಂಥ ಮೇರು ಗಾಯಕನ ಧ್ವನಿ ಸರಿಯಿಲ್ಲವೆಂದು ತಿರಸ್ಕರಿಸಿತು. ಆದರೆ ಮದರಾಸು ಆಕಾಶವಾಣಿಯು ಇವರ ಸಂಗೀತ ಪ್ರತಿಭೆ ಗುರುತಿಸಿ ಶಾಸ್ತ್ರೀಯ ಗಾಯಕನೆಂದು ನೇಮಕಮಾಡಿಕೊಂಡಿತು. ಅಲ್ಲಿಂದ ಅವರ ಅದೃಷ್ಟ ಖುಲಾಯಿಸಿತು. ಘಂಟಸಾಲರು 1.12.1944ರಂದು ಬಿಡುಗಡೆಯಾದ ಪ್ರಭಾತ್ ಫಿಲಂಸ್‌ ಲಾಂಛನದಡಿ ಘಂಟಸಾಲ ಬಾಲರಾಮಯ್ಯ ನಿರ್ದೇಶಿಸಿ ನಿರ್ಮಿಸಿದ, ಪ್ರಭಾಲ ಸತ್ಯನಾರಾಯಣ ಮತ್ತು ಊರಿಗಾಲ ರಾಮಚಂದ್ರರಾವ್ ಸಂಯುಕ್ತ ಸಂಗೀತನಿರ್ದೇಶನದ “ಶ್ರೀ ಸೀತಾ ರಾಮ ಜನನಂ” ತೆಲುಗು ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದರು.
ಘಂಟಸಾಲರ ಮಧುರಾತಿ ಮಧುರ ಕಂಠ, ಸ್ವರ ಬದಲಾವಣೆಯ ವೈಖರಿ, ಗಾಯನದಲ್ಲಿ ಅಭಿವ್ಯಕ್ತಿಸುತ್ತಿದ್ದ ನೈಪುಣ್ಯತೆಯನ್ನು ಸಮಕಾಲೀನ ಮೊಹಮ್ಮದ್ ರಫಿ ಮತ್ತು ಲತಾ ಮಂಗೇಶ್ಕರ್ ಅವರಂತಹ ಉನ್ನತ ಹಿನ್ನೆಲೆ ಗಾಯಕರು ಒಪ್ಪಿಕೊಂಡ ಮುಕ್ತಕಂಠದಿಂದ ಪ್ರಶಂಸಿಸಿದರು. ನಾಯಕನಟರಿಗೆ ತಕ್ಕಂತೆ ಧ್ವನಿ ಮತ್ತು ವಾಕ್ ಶೈಲಿ ಮಾಡ್ಯುಲೈಟ್ ಮಾಡುವಲ್ಲಿ ಅವರು ಅಗ್ರಗಣ್ಯರು. ಭಗವದ್ಗೀತೆ ಮತ್ತು ಅಷ್ಟಪದಿಗಳನ್ನು ಹಾಡುವ ಜತೆಜತೆಗೇ ಅವರ ನಿರೂಪಣಾ ಪ್ರತಿಭೆಚಂದ್ರ ಚಕೋರಿ ಮಂದಹಮನ ಗಮನಾರ್ಹ.


ಘಂಟಸಾಲ ಸ್ವತಃ ಮೂರು ಸಿನಿಮಾಗಳನ್ನೂ ನಿರ್ಮಿಸಿದ್ದಾರೆ.
1956ರಲ್ಲಿ ತೆರೆಕಂಡ “ಭಾಗ್ಯಚಕ್ರ” ಕನ್ನಡ ಚಿತ್ರದಲ್ಲಿ ಉದಯಕುಮಾರ್ ಅವರಿಗಾಗಿ ‘ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ’ ಇವರು ಹಾಡಿದ ಮೊದಲ ಕನ್ನಡ ಚಿತ್ರಗೀತೆ. ಘಂಟಸಾಲರು ಕನ್ನಡದಲ್ಲಿ ಅಂದಾಜು ಒಂದುನೂರು ಗೀತೆಗಳನ್ನು ಹಾಡಿರಬಹುದು. ತೆಲುಗು “ಜಗದೇಕವೀರುನಿ ಕಥ”ದ ಕನ್ನಡ ಅವತರಣಿಕೆಯ ಜಗದೇಕವೀರನ ಕಥೆಯ :ಶಿವಶಂಕರಿ ಶಿವಾನಂದನ ಲಹರಿ”, ವೀರಕೇಸರಿ ಚಿತ್ರದ “ಮೆಲ್ಲುಸಿರೀ ಸವಿಗಾನ/ ಎದೆ ಝಲ್ಲೆನೆ ಹೂವಿನ ಬಾಣ//” ಹಾಗೂ “ಸ್ವಾಭಿಮಾನದ ನಲ್ಲೆ/ ಸಾಕು ಸಂಯಮ ಬಲ್ಲೆ// ಸತ್ಯ ಹರಿಶ್ಚಂದ್ರದ “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ/ ಮತದಲ್ಲಿಮೇಲ್ಯಾವುದೋ’, ನಮೋ ಭೂತನಾಥ/ನಮೋ ದೇವ ದೇವ..// ‘ಬಾಳೊಂದು ನಂದನ ಅನುರಾಗ ಬಂಧನ’, ‘ದೇವಾ ದರುಶನವ ನೀಡೆಯಾ’, ‘ತಾಯಿ ತಂದೆಯ ಸೇವೆಯಾ ಯೋಗ’, ‘ಯಾವಕವಿಯ ಶೃಂಗಾರ ಕಲ್ಪನೆಯೋ’, ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’, ‘ಯಾರಿಗೆ ಯಾರುಂಟು ಎರವಿನ ಸಂಸಾರ’, ‘ಏನೋ ಎಂತೋ, ಜುಂ ಎಂದಿತು ತನುವು’, ‘ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು’ ಅನೇಕ ಹಾಡುಗಳನ್ನು ಹೆಸರಿಸಬಹುದು. ಅವರ ಕಂಚಿನಕಂಠ, ಉಚ್ಚ ಸ್ತರದ ಧ್ವನಿಯ ಮಾಧುರ್ಯಭರಿತ ಹಾಡುಗಳನ್ನು ಸವಿಯುವುದು ಆಹ್ಲಾದಕರ ಅನುಭವ.

-ಗಂಗಾಧರ ಪತ್ತಾರ, ಹಿರಿಯ ಸಾಹಿತಿಗಳು, ಬಳ್ಳಾರಿ
*****