ಕೆ ಸಿ ಕೊಂಡಯ್ಯರಿಗೆ ಗುಲ್ಬರ್ಗಾ, ಬಳ್ಳಾರಿ ವಿವಿ ಮಾಜಿ ಸಿಂಡಿಕೇಟ್, ಸೆನೆಟ್ ಸದಸ್ಯರ ಬೆಂಬಲ

 

ಬಳ್ಳಾರಿ, ಡಿ.5: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಅವರಿಗೆ ಗುಲ್ಬರ್ಗಾ ಹಾಗೂ ಬಳ್ಳಾರಿ ವಿವಿ ಮಾಜಿ ಸೆನೆಟ್, ಸಿಂಡಿಕೇಟ್ ಸದಸ್ಯರು ಬೆಂಬಲ ಸೂಚಿಸಿದ್ದಾರೆ.
ಗುಲ್ಬರ್ಗಾ ವಿವಿ ಮಾಜಿ ಸೆನೆಟ್, ಸಿಂಡಿಕೇಟ್ ಸದಸ್ಯ ಕೆ.‌ಎಂ. ಮಹೇಶ್ವರ ಸ್ವಾಮಿ ಅವರ ನೇತೃತ್ವದಲ್ಲಿ ಐವರು ಭಾನುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಂಡಯ್ಯ ಅವರಿಗೆ ಮತ ನೀಡಿ ಗೆಲ್ಲಿಸಲು ಮತದಾರರಿಗೆ ಮನವಿ ಮಾಡಿದರು.
ಜಾತ್ಯಾತೀತ ನಿಲುವಿನ, ಎಲ್ಲಾ ವರ್ಗದವರ ಜತೆ ಉತ್ತಮ ಒಡನಾಟವಿಟ್ಟುಕೊಂಡಿರುವ ಕೆ ಸಿ ಕೊಂಡಯ್ಯ ಅವರನ್ನು ಚುನಾಯಿಸಿದರೆ ಜನದನಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಮಹೇಶ್ವರ ಸ್ವಾಮಿ ಹೇಳಿದರು.
ಯೋಗ್ಯ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನಾವೆಲ್ಲಾ ಮಾಜಿ ಸೆನೆಟ್, ಸಿಂಡಿಕೇಟ್ ಸದಸ್ಯರು ಬೆಂಬಲ ಸೂಚಿಸುತ್ತಿದ್ದೇವೆ. ಇಂದಿನಿಂದ ಜಿಲ್ಲೆಯಾದ್ಯಾಂತ ಪ್ರವಾಸ ಮಾಡಿ ಪ್ರಥಮ ಪ್ರಾಶಸ್ತ್ಯ ಮತವನ್ನು ಕೊಂಡಯ್ಯ ಅವರಿಗೆ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗುವುದು ಎಂದರು.
ಮಾಜಿ ಲೋಕ‌ಸಭಾ,ರಾಜ್ಯಸಭಾ, ವಿಧಾನ ಪರಿಷತ್ತಿನ ಸದಸ್ಯರಾಗಿರುವ ಕೊಂಡಯ್ಯ ಅವರು ಮೇಲ್ಮನೆಯಲ್ಲಿ ಆಳುವ ಪಕ್ಷವನ್ನು ಸಮರ್ಥವಾಗಿ ಎದುರಿಸುವರು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸೆನೆಟ್, ಸಿಂಡಿಕೇಟ್ ಸದಸ್ಯರಾದ ಮಹಮ್ಮದ್ ಗೌಸ್, ದತ್ತಾತ್ರೇಯ ರೆಡ್ಡಿ, ಕೆ ತಿಪ್ಪೇಸ್ವಾಮಿ, ಸತೀಶ್ ಕಾಂಡ್ರಾ ಮತ್ತು‌ ವೆಂಕಟೇಶ್ ಹೆಗಡೆ ಉಪಸ್ಥಿತರಿದ್ದರು.
*****