ಮೆಲುನುಡಿ
ದಟ್ಟವಾಗಿಹ ಬವಣೆಯ ಜಾಡಿನೊಳಗೆ
ಶಾಂತಿ ಸಹನೆಯು ಕಾಣ ಸಿಗುವುದೇ ?
ಕೊರಗುತ ನಲುಗಿದ ಚಿತ್ತದೊಳಗೆ
ಉಲ್ಲಾಸ ಹೊಮ್ಮುವುದು ಕನಸಲ್ಲವೇ ?
ಬಗೆದು ನೋಡಲು ಆಂತರ್ಯವು
ಗೊಂದಲ ಮುಸುಕಿದ ಗೂಡಾಗಿಹುದು
ಮೆಲು ನುಡಿಯಲ್ಲಿನ
ಭರವಸೆಯು
ಮೂಕವೇದನೆ ಬದಿಗೆ ಸರಿಸಿಹುದು
ಬದುಕಿನ ಪುಟಗಳು ತೆರೆದಿರಲು
ಅನಿವಾರ್ಯ ಸಂಘರ್ಷ
ಹಾದಿಯಲಿ
ಕೊಡವುತ ಮುಂದಡಿ ಇಟ್ಟರಷ್ಟೇ
ನಗೆಮಿಂಚು ಸುಳಿವುದು ಮೊಗದಲಿ
ಇಟ್ಟಹೆಜ್ಜೆಯ ಹಿಂದಕ್ಕೆ ಇಡದೆ
ಸಾಗುತಿರಲು ಬಾಳ ಯಾನದಲಿ
ಪಿಸುಮಾತು ಕೇಳಿ ಬರುತಲಿದೆ
ಒಳಿತಾಗಲಿ ನಿಸರ್ಗದ ಮಡಿಲಿನಲಿ
– ✍️ಡಾ. ಸೌಗಂಧಿಕಾ. ವಿ. ಜೋಯಿಸ್,
ನಂಜನಗೂಡು, (ಮೈಸೂರು ಜಿಲ್ಲೆ)
*****