ಹಗರಿಬೊಮ್ಮನಹಳ್ಳಿಯಲ್ಲೂ ಮುಂದುವರಿದ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರ

ಹಗರಿಬೊಮ್ಮನಹಳ್ಳಿ, ಡಿ.13:
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ತರಗತಿಗಳ ಬಹಿಷ್ಕಾರ ಮುಷ್ಕರ ಸೋಮವಾರವೂ ಮುಂದುವರೆದಿದೆ.
ಮುಖ್ಯಮಂತ್ರಿಗಳಿಗೆ ತಹಶಿಲ್ದಾರ ಅವರ ಮೂಲಕ ಮನವಿ ಸಲ್ಲಿಸಿದರು.
ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು ಹೆಚ್ಚಿಸಬೇಕು ಅಲ್ಲಿಯವರೆಗೆ ಪದವಿ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟ ಮುಷ್ಕರ ಮಾಡಲಾಗುವುದು ಎಂದು ತಾಲ್ಲೂಕು ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಎಂ ಶಿವಮೂರ್ತಿ ಅವರು ಹೇಳಿದರು.
ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು ಸುಮಾರು 15 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಹಲವಾರು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರಕಾರವು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಗೌರವಧನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ 30ರಿಂದ 40 ಸಾವಿರ ವೇತನವನ್ನು ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರಕಾರವು ಅತಿಥಿ ಉಪನ್ಯಾಸಕರಿಗೆ ವರ್ಷದ 12 ತಿಂಗಳ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಾಕಷ್ಟು ಭಾರಿ ಮೌಖಿಕವಾಗಿ ಮತ್ತು ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ ಸರಕಾರವು ಅತಿಥಿ ಉಪನ್ಯಾಸಕರ ನೋವುಗಳಿಗೆ ಸ್ಪಂದಿಸುತ್ತಿಲ್ಲ .ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಹಿಂದೆ ವರ್ಷದ 10 ತಿಂಗಳ ಕಾಲ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. . ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕೇವಲ ಮೂರು ತಿಂಗಳಗಳ ಮಟ್ಟಿಗೆ ಸೇವೆಯನ್ನು ಪರಿಗಣಿಸಿದ್ದಾರೆ ಎಂದರು.
ಸಾಂಕ್ರಾಮಿಕ ಕಾಯಿಲೆ ಕೊರೋನಾ ವೈರಸ್ ಸಮಯದಲ್ಲಿ ಅವರ ಜೀವನ ತುಂಬ ಹೀನಾಯ ಸ್ಥಿತಿಯಲ್ಲಿತ್ತು. ಸರಕಾರವು ಯಾವುದಾದರು ಪರಿಹಾರವನ್ನು ನೀಡುತ್ತದೆ ಎಂದು ಕಾಯುತ್ತಿದ್ದರು. ಆದರೆ ಸರಕಾರ ಅವರ ನಿರೀಕ್ಷೆಗಳನ್ನು ಮತ್ತು ನಂಬಿಕೆಯನ್ನು ಹುಸಿಗೊಳಿಸಿದೆ ಎಂದು ದೂರಿದರು.
ಅನೇಕ ಉಪನ್ಯಾಸಕರು ಎಂ. ಫಿಲ್. ಪಿ.ಹೆಚ್.ಡಿಗಳಂತಹ ಪದವಿಗಳನ್ನು ಮುಗಿಸಿದ್ದರು ಅವರ ಪದವಿಗಳಿಗೆ ತಕ್ಕಂತೆ ಸಂಭಾವನೆ ಸಿಗುತ್ತಿಲ್ಲ. ತರಕಾರಿ ಹಣ್ಣುಗಳ ಮಾರಾಟ ಮಾಡುವುದು ಕೂಲಿ ಕೆಲಸಕ್ಕೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನೋವನ್ನು ವ್ಯಕ್ತ ಪಡಿಸಿದರು.
ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಿಲ್ಲದೆ ತೊಂದರೆಯಾಗಿದೆ, ಅದರೆ ಸರ್ಕಾರದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಯಾರು ಭೇಟಿ ನೀಡಿ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಹಿರಿಯ ಅತಿಥಿ ಉಪನ್ಯಾಸಕರಾದ ಡಾ. ಗುರು ಪ್ರಸಾದ್ ಎಚ್ ಎಸ್, ನಾಗರಾಜ , ಪಂಪಾನಾಯ್ಕ, ಶ್ರೀಶೈಲ, ಮಂಜುನಾಥ, ರಾಮಾಂಜನೇಯ, ರವಿ ಮಾಲವಿ, ನಿಸಾರ್ ಅಹಮದ್, ಕೆ ರಂಗನಾಥ, ದಿವಾಕರ್ ಹಿರೇಮಠ, ಸೋಮೇಶ್ ಉಪ್ಪಾರ, ಬಸವರಾಜ, , ಅಮೀರ್ ಜಾನ್ ,ಶಾಂತಕುಮಾರಿ, ವಿಜಯಲಕ್ಷ್ಮಿ, ಸವಿತಾ.ಮುಂತಾದವರು ಉಪಸ್ಥಿತರಿದ್ದರು.
*****