ದೊರೆ ಬರುವನೆಂದು ಬರಗೆಟ್ಟು ಬರಿದಾದವಳ ಮನಂ….
ಜಗಮೆಚ್ಚಿದ ಚಲುವಿನ ಸಿರಿರಾಣಿ ನಲುವಿನಲಿ ಗೆಲುವಿನಲಿ
ತಾನು ಬರುವ ದಾರಿಯಲ್ಲಿ ಬಂಗಾರದ ಮೈ ಕಳೆಗಟ್ಟಿ
ನಿಂತಿರುತಿರಲವಳ ಕಾಣುತ್ತಲೆ ಬಣ್ಣಬಣ್ಣಗಳ ಹಸಿಯಾದ
ಕನಸುಗಳ ಮೋಡಗಳನ್ನವಳ ಮೃದು ತನು ಮನದೊಳಗೆ
ನುಸುಳಿಸಿದ ಭೂಪಾಲನು ತನ್ನ ದೊರೆಮನೆಗೆ ಒಲವಿನೊಳಾ
ಕನ್ನಾಮಣಿಯನ್ಶ್ವೇತ ಹಂಸಗಳೇ ಹೊತ್ತು ಹಾರುತ್ತಿರ್ದ ಪವನ
ರಥದಿ ಕರೆದುಕೊಂಡು ಹೋದಾಕ್ಷಣದಿ ನವತರುಣಿಗೆ ಒಲವ
ಸಿಂಚನವಂಗೈದು ತಾನ್ಮಿಚಲತೆಯಂತಾಗಿ ಸರಿದವನು ಮತ್ತೆ
ಮತ್ತೆ ಸಿಗದಿರಲಾರನೆಂದು ತನ್ನತಾನವನಿಗರ್ಪಿಸಿಕೊಂಡಿರ್ಪ
ಮಿಂಚಲತೆಯಿಂದ ಪೋದವನು ಹೂವಾಗಿ ಕಾಯಾಗಿ ಹಣ್ಣಾಗಿ
ತನ್ನ ಕಾಯುವಿಕೆಗೆ ಫಲವಾಗಿ ದೊರಕುವ ದೊರೆಯೆಂದು
ಕಾದು ಕಾದು ಕಾಯುವ ನೋವಿನಲ್ಲೇ ನಲಿವ ಕಾಣುತ್ತಾ ಕನಸ
ಸೀಮೆಗೋದ ಸಿರಿಮೈಯ ನಾರಿ ಪವಡಿಸಿದ ಕೋಣೆಯು
ಕತ್ತಲಾಗಿ ಜೇಡಕ್ಕೆ ಈಡಾಗಿ ಅದರ ಬಲೆಯಲ್ಲಿ ಮಲಗಿರೆ
ವಿರಹದ ವೇದನೆಯಲ್ಲಿ ಒಲವ ಬಲೆಯೊಳು ವಿಲವಿಲ
ಒದ್ದಾಡುತ್ತಾ ತನ್ನ ಕಾಯವು ಕೊಳೆಯಾಗಿ ಕಸವಾಗುವ
ಮುನ್ನ ಹಿಂದಿರುಗಿ ಬರುವನು ತನ್ನ ಮನವ ಕದ್ದ ದೊರೆ
ತನ್ನ ಕಾಣಲು ತನ್ನ ತನು ಮನವ ನೀಡಲು ಬಂದೇ ಬರುವನು
ಎಂಬಾಸೆಯೊಳು ಇರುವ ಕಾವ್ಯ ಕನ್ನಿಕೆಗೆ ಇನ್ನಷ್ಟು
ಕನಸುಗಳ ತುಂಬಲು ಬಂದ ಕಾವ್ಯ ಕಾಣಿಕೆಯ ಕವನ
ದೊರೆ ಬರುವನೆಂದು ಬರಗೆಟ್ಟು ಬರಿದಾದವಳ ಮನಂ.
– ಮನಂ, ಬೆಂಗಳೂರು
*****