ಅನುದಿನ‌ಕವನ-೩೫೮, ಕವಿ:ಮನಂ(ಎಂ.ನಂಜುಂಡಸ್ವಾಮಿ) ಐಪಿಎಸ್, ಬೆಂಗಳೂರು, ಕವನದ ಶೀರ್ಷಿಕೆ:ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?

ನಾಡಿನ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಸಾಹಿತಿ, ಸಂಶೋಧಕ ಶ್ರೀ ಮನಂ(ಎಂ.ನಂಜುಂಡಸ್ವಾಮಿ) ಅವರ ಮತ್ರೊಂದು ಕೃತಿ ಪ್ರೇಮ ಕವಿತೆಗಳ ಗುಚ್ಚ
‘ಮನದೊಳಿರಲಾರದ ಕಾವ್ಯಕನ್ನಿಕೆ’ ಡಿ. 25ರಂದು ಶಾಂತಿದೂತ ಕ್ರಿಸ್ತ ಹುಟ್ಟಿದ ಪವಿತ್ರ ಕ್ರಿಸ್ ಮಸ್ ದಿನದಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆಹ್ವಾನಿತ ಗಣ್ಯರು, ಹಿತೈಷಿ, ಅಭಿಮಾನಿಗಳ ಸಮ್ಮುಖದಲ್ಲಿ ಕೃತಿ ಬಿಡುಗಡೆಯಾಗಲಿದೆ.
ಮನಂ ಅವರ ‘ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯವೆಲ್ಲಿ? ಕವಿತೆಯನ್ನು ಪ್ರಕಟಿಸುವ ಮೂಲಕ
ಕರ್ನಾಟಕ ಕಹಳೆ ಡಾಟ್ ಕಾಮ್ ಕಾರ್ಯಕ್ರಮಕ್ಕೆ ಶುಭ ಕೋರುತ್ತಿದೆ.👇

ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?

ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?
ನನ್ನ ಮುಟ್ಟದ ಮೂಸದ ಬಯಸದ
ನನ್ನ ಕೂಡದ ಕರೆಯದ ಕೊರೆಯದ
ನನ್ನ ಬೇಡದ ಬಡಿಯದ ಬಿಟ್ಟಿರದ
ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?

ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?
ನನ್ನ ಕಣ್ಣಿಗೆ ಕಾಣದಾದ ಕಾವ್ಯಕನ್ನಿಕೆ
ನನ್ನ ಮನದ ಮೂಲೆಯಿಂದ ಮರೆಯಾದ
ನನ್ನ ನಾಡ ತೊರೆದು ನಡೆದು ಹೋದ
ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?

ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?
ನನ್ನ ಕವಿಯಾಗಿಸಿ ಅಚ್ಚಳಿಯದೆ ಉಳಿಸಿದ
ನನ್ನ ಬರಹವ ಎಂದೂ ಬರಡಾಗಿಸದ
ನನ್ನ ಬದುಕಿಗೆ ನಿಜ ಅರ್ಥವ ನೀಡಿದ
ನನ್ನ ಕಾವ್ಯ ಕನ್ನಿಕೆ ಇಲ್ಲದೆ ಕಾವ್ಯ ಎಲ್ಲಿ?

– ಮನಂ, ಬೆಂಗಳೂರು
*****