ಅನುದಿನ ಕವನ-೩೬೨, ಕವಿ: ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಜೋಕೆ

“ಸಹಿಷ್ಣುತೆ, ಸೌಹಾರ್ದತೆ ನಮ್ಮ ದೌರ್ಬಲ್ಯವಲ್ಲ. ಅದು ನಮ್ಮ ಹೃದಯ ವೈಶಾಲ್ಯತೆ. ಆದರೆ ಕನ್ನಡದ ನೆಲ-ಜಲ-ನುಡಿಗೆ ಧಕ್ಕೆ ತರುವವರನೆಂದು ಕನ್ನಡಿಗರು ಕ್ಷಮಿಸೋಲ್ಲ. ಭಾಷೆ-ಗಡಿಗಳ ವಿಷಯದಲ್ಲಿ ಕಿಚ್ಚು ಹಚ್ಚುವ, ದೇಶ-ರಾಜ್ಯಗಳ ಸಮಗ್ರತೆಗೆ ಭಂಗ ತರುವ ಕಿಡಿಗೇಡಿಗಳಿಗೆಂದು ಕರುನಾಡಿನಲ್ಲಿ ನೆಲೆಯಿಲ್ಲ. ಅಂತಹ ವಿಧ್ವಂಸಕರನ್ನು ಧಿಕ್ಕರಿಸಿ, ಹುಟ್ಟಡಗಿಸುವ ಕನ್ನಡಿಗರು ಅಪ್ಪಟ ಸ್ವಾಭಿಮಾನಿಗಳೂ ಹೌದು. ಅಕ್ಷರಶಃ ದೇಶಾಭಿಮಾನಿಗಳೂ ಹೌದು. ಏನಂತೀರಾ..?” – ಹೆಮ್ಮೆಯಿಂದ ಎ.ಎನ್.ರಮೇಶ್. ಗುಬ್ಬಿ.

ಜೋಕೆ..!

ಬಾವುಟವನ್ನಷ್ಟೇ
ಸುಡಬಹುದು
ಭಾಷೆಯನ್ನಲ್ಲ.!

ಪ್ರತಿಮೆಯನ್ನಷ್ಟೇ
ಭಂಜಿಸಬಹುದು
ಪ್ರತಿಷ್ಟೆಯನ್ನಲ್ಲ.!

ಶಾಂತಿಯನ್ನಷ್ಟೇ
ಕದಡಬಹುದು
ಸಾಮರಸ್ಯವನ್ನಲ್ಲ.!

ಮತಗಳನ್ನಷ್ಟೇ
ಒಡೆಯಬಹುದು
ಮನಗಳನ್ನಲ್ಲ.!

ಭ್ರಾಂತಿಯನ್ನಷ್ಟೇ
ಸೃಷ್ಟಿಸಬಹುದು
ಕ್ರಾಂತಿಯನ್ನಲ್ಲ.!

ಸೌಹಾರ್ದತೆಗಷ್ಟೇ
ಭಂಗತರಬಹುದು
ಭಾವೈಕ್ಯತೆಗಲ್ಲ.!

ನಾಡು-ನುಡಿಗಳಿಗೆ
ಧಕ್ಕೆಯೆಣಿಸಿದರೆಂದು
ನಿಮಗುಳಿಗಾಲವಿಲ್ಲ.!

ದೇಶದ ಸಮಗ್ರತೆಗೆ
ಭೇದವೆಣಿಸಿದರೆಂದು
ಕ್ಷಮೆಯೆಂಬುದಿಲ್ಲ.!

ಎಚ್ಚರವಿರಲಿ ಪ್ರಜ್ಞೆ…
ವಿದ್ವಂಸಕರಿಗೆಂದೆಂದು
ಇಲ್ಲಿ ಉಳಿಗಾಲವಿಲ್ಲ.!

-ಎ.ಎನ್.ರಮೇಶ್. ಗುಬ್ಬಿ.
*****