ಅನುದಿನ‌ ಕವನ-೩೬೪, ಕವಯತ್ರಿ: ಎಸ್. ವಿನುತಾ, ಬೆಂಗಳೂರು, ಕವನದ ಶೀರ್ಷಿಕೆ: ದೀಪವೇ ಇಲ್ಲದಿರುವಾಗ…

ದೀಪವೇ ಇಲ್ಲದಿರುವಾಗ….

ಒಲೆಯೇ ಉರಿಯದ
ಮನೆಯಿರುವಾಗ,
ಸೂರೇ ಇಲ್ಲದ
ಜನರಿರುವಾಗ,
ದೂರ ದೂರದ ಹಾದಿ
ನಡೆದ ಕಾಲುಗಳು ಕುಸಿದಾಗ,
ಬಯಲ ನಂಬಿದವರು
ಬಯಲಲ್ಲೇ ಅಸುನೀಗುವಾಗ,
ಹಸಿವೆಂಬ ಅಸುರ ದಿನ ರಾತ್ರಿ
ನರ್ತಿಸುವಾಗ,
ಬಯಲ ಬದುಕುಗಳು
ಬೀದಿಗೆ ಬೀಳುವಾಗ,
ರಕ್ಷಣೆಗೆ ನಿಂತವರನ್ನೇ
ಕಲ್ಲುಗಳು ಬೆನ್ನತ್ತುವಾಗ,
ದೇವರೇ ಇಲ್ಲಿ ವಿಷಕೆ, ಕುಣಿಕೆಗೆ
ಬಲಿಯಾಗುತಿರುವಾಗ,
ಅನ್ನದ ಮೂಲವೇ
ಪ್ರತಿಭಟಿಸುತಿರುವಾಗ,
ಬೆನ್ನೆಲುಬೇ
ಮುರಿದಿರುವಾಗ,
ನಾಳೆಗಳು ಭಯದಿಂದ
ಸುತ್ತುವರಿದಾಗ,
ಜಗದ ತುಂಬೆಲ್ಲ ಕತ್ತಲೆಯೇ
ತುಂಬಿರುವಾಗ,
ದೀಪವನ್ನಾದರೂ ಹೇಗೆ
ಹಚ್ಚಲಿ ನಾನು?
ಹನಿ ಎಣ್ಣೆಯೂ
ಇಲ್ಲದಿರುವಾಗ…
ದೀಪವನ್ನಾದರೂ ಹೇಗೆ
ಹಚ್ಚಲಿ ನಾನು?
ದೀಪವೇ ಇಲ್ಲದಿರುವಾಗ…

✍️ ಎಸ್. ವಿನುತಾ, ಬೆಂಗಳೂರು
*****