ಮೋರಿಗೇರಿ: ನಯನ ಸಂಗೀತ ಕಲಾ ಸಂಸ್ಥೆಯಿಂದ ಸಂಗೀತ ಸಂಜೆ

ಹಗರಿಬೊಮ್ಮನಹಳ್ಳಿ, ಜ. 1: ತಾಲ್ಲೂಕಿನ ಮೋರಿಗೇರಿ ಗ್ರಾಮದ ನಯನ ಸಂಗೀತ ಕಲಾ ಸಂಸ್ಥೆ (ರಿ) ಈಚೆಗೆ ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ ಬಸವನಗೌಡ್ರು ಅವರು ಮಾತನಾಡಿ, ನಶಿಸಿ ಹೋಗುತ್ತಿರುವ ಜನಪದ, ಶಾಸ್ತ್ರೀಯ ಸಂಗೀತ, ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ನಯನ ಸಂಗೀತ ಕಲಾ ಸಂಸ್ಥೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮದಲ್ಲಿ ಸಾಂಸ್ಕೃತಿಕ ವಾತಾವರಣಕ್ಕಾಗಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಎಲ್ ರಾಜೇಂದ್ರಪ್ಪ ಮಾತನಾಡಿ, ಕಲೆಗಳು ಜೀವಂತವಾಗಿ ಉಳಿಯಬೇಕಾದರೆ ಕಲಾವಿದರನ್ನು ಉತ್ತೇಜಿಸಿ ಗೌರವಿಸಬೇಕು ಎಂದು ಹೇಳಿದರು.
ಕಲಾ ಸಂಸ್ಥೆಯ ಅಧ್ಯಕ್ಷ , ಉಪನ್ಯಾಸಕ ಚಲವಾದಿ ಕೊಟ್ರೇಶ್ ಮಾತನಾಡಿ, ಸಾಮಾಜಿಕ ಸಂದೇಶಗಳಿಲ್ಲದ ಟೀವಿ ಧಾರವಾಹಿಗಳ ವೀಕ್ಷಣೆ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದ ಸಂಗೀತ, ರಂಗ ಕಲೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ ಎಂದು ವಿಷಾಧಿಸಿದರು.
ವಿವಿಧ ಕಲೆಗಳಲ್ಲಿ ನೈಪುಣ್ಯತೆ ಹೊಂದಿರುವ ಕಲಾವಿದರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವುದು ಸಂಘ ಸಂಸ್ಥೆಗಳ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕರು ಹಗರಿಬೊಮ್ಮನಹಳ್ಳಿಯ ಉಪನ್ಯಾಸಕರಾದ ಬಸವರಾಜ, ಎಂ ಜಿ ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವರಂಜನಿ ಸಂಗೀತಾ ಪಾಠ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಹಾರ್ಮೋನಿಯಂ ಸಾಥ್ ಬಿ ವೀರೇಶ್ ಮೋರಿಗೇರಿ ನೀಡಿದರು. ನಾಗರಾಜ್ ಗಂಟೆ ನಿರೂಪಿಸಿದರು.
*****