ಅನುದಿನ ಕವನ-೩೬೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಕಾಲನ ಓಟಕೆ ದಣಿವಿಲ್ಲ…..

 

ಕಾಲನ ಓಟಕೆ ದಣಿವಿಲ್ಲ….

ಕಾಲ ಯಮ ಕಳೆಯುತಿಹನು
ದಿನ ದಿನವೂ ಕ್ಷಣ ಕ್ಷಣವೂ
ನಮ್ಮ ಆಯಷ್ಯದ ಮೊತ್ತವನು
ನಮಗಾರಿಗೂ ಅರಿವಾಗದಂತೆ.

ಇರುವಷ್ಟು ಕಾಲ ಈ ಜಗದಲಿ
ಪ್ರೀತಿ ಗುಣಿಸಿ ದ್ವೇಷ ಭಾಗಿಸಿ
ಸ್ನೇಹ ಕೂಡಿಸಿ ಶೇಷ ಹಂಚೋಣ
ಬಾಳ ದುಡಿಮೆಯ ಲೆಕ್ಕಾಚಾರದಲಿ

ಓಡುತಿದೆ ಕಾಲನ ಕೋಣ ಶರವೇಗದಿ
ಹಿಡಿತಕು ದಕ್ಕದೆ.ಯಾರಿಗೂ ಬಗ್ಗದೆ
ಕಾಲನ ಓಟಕೆ ಎಲ್ಲಿಯ ದಣಿವು! ದಣಿವುಂಟು ಸಾಧನೆಯ ಓಟಕೆ.

ಜನನ ಮರಣದ ಈ ಪಯಣದಲಿ
ನೋವುಗಳೆಷ್ಟೋ ನಲಿವುಗಳೆಷ್ಟೋ
ಸೋಲು ಗೆಲುವಿನ ಬೇವು ಬೆಲ್ಲಗಳೆಷ್ಟೋ
ಆಸೆ ನಿರಾಸೆಗಳೆಷ್ಟೋ ದಾರಿಯುದ್ದಕ್ಕೂ…

ಬೆದರದಿರು ಬೆಚ್ಚದಿರು ಯಾವುದಕ್ಕು
ನುಗ್ಗು ದೈರ್ಯದಿ, ಬಗ್ಗು ವಿನಯದಿ
ಉತ್ಸಾಹದಿ ಮಾಡೋಣ ಕಾಯಕವ
ಪಡದೇ ಪಡೆಯುವೆವು ಗೆಲುವಿನ ಪದಕವ

ವರು ವರುಷ ಉರುಳುತ ಸಾಗುತಿದೆ.
ಓಡುತಿರುವೆವು ನಾವು ಕಾಲನ ಆಣತೆಯಂತೆ
ಮರಣ ನಿಲ್ದಾಣ ಬರಬಹುದು ಬಹು ಬೇಗ
ಅದು ಬರುವ ಮುನ್ನ ಪೂರೈಸೋಣ ನಮ್ಮ ಕಾಯಕವ

ಬಿಸಿಲುಂಡು ನೆರಳೀವ ವೃಕ್ಷದಂತೆ
ತಾ ಸುಟ್ಟು ಬೆಳಕ ನೀವ ಪಣತಿಯಂತೆ
ಬದುಕೋಣ ನಾವು ಪರೋಪಕಾರಿಯಾಗಿ
ಉಸಿರಿರದಿರೆ ದೇಹದಿ ಹೆಸರಿರಬೇಕು ಈ ಜಗದಿ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ,
*****